ADVERTISEMENT

ಬೆಂಗಳೂರು: ರಿಲಯನ್ಸ್ ಜಿಯೊ ಸಹಾಯಕ ವ್ಯವಸ್ಥಾಪಕ ಮೋಹನ್ ಕುಮಾರ್ ಆತ್ಮಹತ್ಯೆ

ಪೀಣ್ಯ ಬಳಿ ವಸತಿಗೃಹದಲ್ಲಿ ಮೃತದೇಹ ಪತ್ತೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2022, 19:30 IST
Last Updated 4 ಏಪ್ರಿಲ್ 2022, 19:30 IST
ಮೋಹನ್‌ ಕುಮಾರ್
ಮೋಹನ್‌ ಕುಮಾರ್   

ಬೆಂಗಳೂರು: ಪೀಣ್ಯ ಠಾಣೆ ವ್ಯಾಪ್ತಿಯ ವಸತಿಗೃಹವೊಂದರ ಕೊಠಡಿಯಲ್ಲಿ ಮೋಹನ್ ಕುಮಾರ್ (48) ಎಂಬುವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.

‘ರಿಲಯನ್ಸ್ ಜಿಯೊ ಕಂಪನಿಯ ರಾಜ್ಯ ಕಚೇರಿಯ ಸಹಾಯಕ ವ್ಯವಸ್ಥಾಪಕರಾಗಿದ್ದ ಮೋಹನ್‌ಕುಮಾರ್, ಗೊರಗುಂಟೆಪಾಳ್ಯದ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರ ಫ್ಲ್ಯಾಟ್‌ನಲ್ಲಿ ಪತ್ನಿ ಜೊತೆ ವಾಸವಿದ್ದರು. ಪತ್ನಿ ಸಹ ಖಾಸಗಿ ಕಂಪನಿಯೊಂದರ ಉದ್ಯೋಗಿ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಮಾರ್ಚ್ 25ರಂದು ಮನೆ ಬಿಟ್ಟು ಹೋಗಿ ನಾಪತ್ತೆಯಾಗಿದ್ದ ಮೋಹನ್‌ಕುಮಾರ್, ‘ನನ್ನನ್ನು ಹುಡುಕಬೇಡಿ’ ಎಂಬ ಸಂದೇಶವನ್ನು ಪತ್ನಿ ಹಾಗೂ ಇತರಿಗೆ ಕಳುಹಿಸಿದ್ದರು. ಗಾಬರಿಗೊಂಡ ಪತ್ನಿ, ಮೋಹನ್‌ಕುಮಾರ್ ನಾಪತ್ತೆ ಬಗ್ಗೆ ಆರ್‌ಎಂಸಿ ಯಾರ್ಡ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸರು ಹುಡುಕಾಟ ಆರಂಭಿಸಿದ್ದರು’ ಎಂದೂ ತಿಳಿಸಿದರು.

ADVERTISEMENT

ವಸತಿಗೃಹದಲ್ಲಿ ವಾಸ: ‘ಪೀಣ್ಯ ಠಾಣೆ ವ್ಯಾಪ್ತಿಯ ವಸತಿಗೃಹವೊಂದರ ಕೊಠಡಿಯಲ್ಲಿ ಮೋಹನ್‌ಕುಮಾರ್ ಉಳಿದುಕೊಂಡಿದ್ದರು. ಮಾರ್ಚ್ 26ರಂದು ಕೊಠಡಿಯಿಂದ ಹೊರಗೆ ಬಂದಿರಲಿಲ್ಲ. ಅನುಮಾನಗೊಂಡ ಸಿಬ್ಬಂದಿ, ಕಿಟಕಿಯಲ್ಲಿ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡಿತ್ತು’ ಎಂದು ಪೊಲೀಸ್ ಅಧಿಕಾರಿ ಹೇಳಿದರು.

‘ಸ್ಥಳಕ್ಕೆ ಹೋಗಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಮರಣೋತ್ತರ ಪರೀಕ್ಷೆ ಮಾಡಿಸಿ ಸಂಬಂಧಿಕರಿಗೆ ಮೃತದೇಹ ಹಸ್ತಾಂತರಿಸಲಾಯಿತು. ಮೃತದೇಹ ಸಿಕ್ಕ ಕೊಠಡಿಯಲ್ಲಿ ಮದ್ಯದ ಬಾಟಲಿ ಪತ್ತೆಯಾಗಿತ್ತು’ ಎಂದೂ ತಿಳಿಸಿದರು.

ವಿಪರೀತ ಸಾಲದಿಂದ ಜಿಗುಪ್ಸೆ: ‘ಮೋಹನ್‌ಕುಮಾರ್ ಹಲವರ ಬಳಿ ಸಾಲ ಮಾಡಿದ್ದರು ಎನ್ನಲಾಗುತ್ತಿದೆ. ಸಾಲ ವಾಪಸು ತೀರಿಸಲು ಸಾಧ್ಯವಾಗದೇ ತೊಂದರೆ ಅನುಭವಿಸುತ್ತಿದ್ದರು. ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪತ್ನಿ ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಮೋಹನ್‌ಕುಮಾರ್ ಸಾವಿನ ಸಂಬಂಧ, ರಿಲಯನ್ಸ್ ಜಿಯೊ ಕಂಪನಿ ಸಹೋದ್ಯೋಗಿಗಳನ್ನು ವಿಚಾರಣೆ ಮಾಡಲಾಗಿದೆ. ಆತ್ಮಹತ್ಯೆಗೆ
ನಿಖರ ಕಾರಣವೇನು ಎಂಬುದನ್ನು ತಿಳಿಯಲು ತನಿಖೆ ಮುಂದುವರಿದಿದೆ’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.