ADVERTISEMENT

18 ತಿಂಗಳಲ್ಲಿ ಧಾರ್ಮಿಕ ಸೌಧ ನಿರ್ಮಾಣ: ಸಚಿವ ರಾಮಲಿಂಗಾರೆಡ್ಡಿ

ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 23:30 IST
Last Updated 9 ಫೆಬ್ರುವರಿ 2026, 23:30 IST
ರಾಮಲಿಂಗಾರೆಡ್ಡಿ ಅವರು ಧಾರ್ಮಿಕ ಸೌಧದ ನೀಲ ನಕ್ಷೆಯನ್ನು ವೀಕ್ಷಿಸಿದರು. ರಾಜೇಂದ್ರ ಕುಮಾರ್ ಕಟಾರಿಯಾ ಉಪಸ್ಥಿತರಿದ್ದರು
ರಾಮಲಿಂಗಾರೆಡ್ಡಿ ಅವರು ಧಾರ್ಮಿಕ ಸೌಧದ ನೀಲ ನಕ್ಷೆಯನ್ನು ವೀಕ್ಷಿಸಿದರು. ರಾಜೇಂದ್ರ ಕುಮಾರ್ ಕಟಾರಿಯಾ ಉಪಸ್ಥಿತರಿದ್ದರು   

ಬೆಂಗಳೂರು: ‘ನಗರದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ನೂರಾರು ಎಕರೆ ಜಾಗವಿದ್ದರೂ ಇಲಾಖೆಗೆ ಸ್ವಂತ ಕಟ್ಟಡವಿರಲಿಲ್ಲ. ಆದ್ದರಿಂದ ಅಂದಾಜು ₹27 ಕೋಟಿ ವೆಚ್ಚದಲ್ಲಿ ನೂತನ ಧಾರ್ಮಿಕ ಸೌಧವನ್ನು ಹೊಯ್ಸಳ ಶೈಲಿಯಲ್ಲಿ ನಿರ್ಮಿಸಲಾಗುತ್ತಿದೆ’ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ‌

ವಿಕಾಸಸೌಧದ ಹಿಂಭಾಗದಲ್ಲಿರುವ ರಾಮಾಂಜನೇಯ ದೇವಸ್ಥಾನದ ಪಕ್ಕದಲ್ಲಿ, ಮುಜರಾಯಿ ಇಲಾಖೆಗೆ ಸೇರಿದ ಜಾಗದಲ್ಲಿ ಧಾರ್ಮಿಕ ಸೌಧ ನಿರ್ಮಾಣಕ್ಕೆ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

‘ಈ ಸೌಧವು ನೆಲಮಹಡಿ, ಚಾವಣಿ ಹೊರತುಪಡಿಸಿ ಐದು ಮಹಡಿಗಳನ್ನು ಒಳಗೊಳ್ಳಲಿದೆ. ಮುಂದಿನ 18 ತಿಂಗಳಲ್ಲಿ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಸದ್ಯ ಇಲಾಖೆಗೆ ಸ್ವಂತ ಕಟ್ಟಡ ಇರದ ಕಾರಣ, ಖಾಸಗಿ ಕಟ್ಟಡಕ್ಕೆ ಬಾಡಿಗೆ ಪಾವತಿಸಲಾಗುತ್ತಿದೆ’ ಎಂದರು.

ADVERTISEMENT

ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ‘ಇಲಾಖೆ ಪ್ರಕಾರ ರಾಜ್ಯದಲ್ಲಿ ‘ಎ’, ‘ಬಿ’ ಮತ್ತು ‘ಸಿ’ ವರ್ಗದ 34,564 ದೇವಸ್ಥಾನಗಳಿವೆ. ಸುಮಾರು 4,500 ದೇವಸ್ಥಾನಗಳು ಕಣ್ಮರೆಯಾಗಿರುವುದು ಕಳೆದ ವರ್ಷ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿತ್ತು. ಪುನಃ ಎಲ್ಲ ಕಡೆ ಸಮೀಕ್ಷೆ ನಡೆಸಿದ ಬಳಿಕ 800 ದೇವಸ್ಥಾನಗಳು ಪತ್ತೆಯಾಗಿದ್ದವು. ಉಳಿದ ದೇವಸ್ಥಾನಗಳನ್ನು ಗುರುತಿಸುವ ಕಾರ್ಯ ಸಮೀಕ್ಷೆ ಮೂಲಕ ಮುಂದುವರಿದಿದೆ’ ಎಂದು ಹೇಳಿದರು.

ಕಟ್ಟಡದಲ್ಲಿ ಏನೆಲ್ಲ ಇರಲಿದೆ?:

ಕಟ್ಟಡದ ನೆಲಮಹಡಿಯಲ್ಲಿ ಪಾರ್ಕಿಂಗ್, ಕ್ಯಾಂಟೀನ್ ಇರಲಿದೆ. ಮೊದಲ ಮಹಡಿಯನ್ನು ವಾಣಿಜ್ಯ ಉದ್ದೇಶಕ್ಕೆ ನೀಡಲಾಗುತ್ತದೆ. ಎರಡನೇ ಮಹಡಿಯಲ್ಲಿ 80 ಆಸನ ಸಾಮರ್ಥ್ಯದ ಸಭಾಂಗಣ, ಆಗಮ ಕಚೇರಿ, ಮುಖ್ಯ ಆಡಳಿತ ಕಚೇರಿ ಇರಲಿದೆ.

ಮೂರನೇ ಮಹಡಿಯಲ್ಲಿ ಆಯುಕ್ತರ ಕಚೇರಿ, ಕೋರ್ಟ್ ಹಾಲ್‌ ಇರಲಿದ್ದು, ನಾಲ್ಕನೇ ಮಹಡಿಯಲ್ಲಿ ಅಧೀಕ್ಷಕರ ಹಾಗೂ ಹೊರಾಂಗಣ ಕಚೇರಿ ಇರಲಿದೆ. ಐದನೇ ಮಹಡಿಯಲ್ಲಿ ಡಿಜಿಟಲ್‌ ಗ್ರಂಥಾಲಯ, ರಾಜ್ಯ ಧಾರ್ಮಿಕ ಪರಿಷತ್‌ ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.