ADVERTISEMENT

ಒತ್ತುವರಿ ತೆರವು: ಪೊಲೀಸರ ನೆರವು

ಮಾರ್ಷಲ್‌, ಬಿಎಂಟಿಎಫ್‌ಗೆ ಮನವಿ: ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2022, 19:44 IST
Last Updated 11 ಅಕ್ಟೋಬರ್ 2022, 19:44 IST
ಕೆ.ಆರ್.ಪುರ ಕ್ಷೇತ್ರದ ಬಸವನಪುರ ವಾರ್ಡಿನ ಎಸ್.ಆರ್. ಬಡಾವಣೆಯಲ್ಲಿ ಮನೆಯೊಂದರ ಗೋಡೆಯನ್ನು ತೆರವು ಮಾಡಲಾಯಿತು
ಕೆ.ಆರ್.ಪುರ ಕ್ಷೇತ್ರದ ಬಸವನಪುರ ವಾರ್ಡಿನ ಎಸ್.ಆರ್. ಬಡಾವಣೆಯಲ್ಲಿ ಮನೆಯೊಂದರ ಗೋಡೆಯನ್ನು ತೆರವು ಮಾಡಲಾಯಿತು   

ಬೆಂಗಳೂರು: ‘ಒತ್ತುವರಿ ತೆರವಿನ ಸಂದರ್ಭದಲ್ಲಿ ಸ್ಥಳೀಯ ಪೊಲೀಸರಿಂದ ಬಿಬಿಎಂಪಿ ಅಧಿಕಾರಿಗಳಿಗೆ ರಕ್ಷಣೆ ನೀಡುವಂತೆ ಪೊಲೀಸ್‌ ವರಿಷ್ಠರಿಗೆ ಮನವಿ ಮಾಡಿಕೊಳ್ಳಲಾಗುವುದು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದರು.

ಒತ್ತುವರಿ ತೆರವಿನ ಸಂದರ್ಭದಲ್ಲಿ ಸ್ಥಳೀಯ ಪೊಲೀಸರು ಬಿಬಿಎಂಪಿ ಅಧಿಕಾರಿಗಳಿಗೆ ನೆರವಾಗುತ್ತಿಲ್ಲ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ತುಷಾರ್‌ ಗಿರಿನಾಥ್‌, ‘ಈ ಹಿಂದೆ ಕಂದಾಯ ಇಲಾಖೆಯವರು ಸಹಾಯ ಮಾಡುತ್ತಿಲ್ಲ ಎನ್ನಲಾಗುತ್ತಿತ್ತು. ಇದೀಗ ಪೊಲೀಸರ ಬಗ್ಗೆ ಹೇಳಲಾಗುತ್ತಿದೆ. ಪೊಲೀಸ್‌ ಇಲಾಖೆಯ ಹಿರಿಯಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಅಗತ್ಯ ನೆರವು ಕೋರಲಾಗುವುದು’ ಎಂದರು.

‘ಬಿಎಂಟಿಎಫ್‌ನಲ್ಲಿ ಹೆಚ್ಚಿನ ಸಿಬ್ಬಂದಿ ಇಲ್ಲ. ಆದರೂ, ಅವರಿಂದ ಸಾಧ್ಯವಾದಷ್ಟು ರಕ್ಷಣೆಯನ್ನು ಪಡೆಯಲಾಗುತ್ತದೆ. ನಮ್ಮಲ್ಲಿರುವ ಮಾರ್ಷಲ್‌ಗಳು ಕೂಡ ಒತ್ತುವರಿ ತೆರವಿನ ಸಂದರ್ಭದಲ್ಲಿ ನೆರವಾಗುತ್ತಿದ್ದಾರೆ’ ಎಂದರು.

ADVERTISEMENT

ತೆರವು: ಬಿಬಿಎಂಪಿ ಮಹದೇವಪುರ ವಲಯದಲ್ಲಿ ಶೀಲವಂತನಕೆರೆ ಹಾಗೂ ಕೆ.ಆರ್.ಪುರ ವಿಭಾಗದ ಎಸ್.ಆರ್. ಲೇಔಟ್‌ನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಮಂಗಳವಾರ ನಡೆಯಿತು.

ಶೀಲವಂತನಕೆರೆಯ ಬಳಿಯ ಅಸೆಂಟ್ ಗಾರ್ಡೇನಿಯ ಹಿಂಭಾಗ ಸುಮಾರು 130 ಮೀಟರ್ ಉದ್ದದ ಕಾಂಪೌಂಡ್ ತೆರವುಗೊಳಿಸಲಾಗಿದೆ. ಕೆ.ಆರ್.ಪುರ ವಿಭಾಗ ಬಸವನಪುರ ವಾರ್ಡ್ ಎಸ್.ಆರ್ ಲೇಔಟ್‌ನಲ್ಲಿ ಸುಮಾರು 80 ಮೀಟರ್ ಉದ್ದದ ಮಳೆ ನೀರುಗಾಲುವೆಗೆ ಸ್ಥಳದಲ್ಲಿ ಆರು ಆರ್.ಸಿ.ಸಿ ಮನೆ ಹಾಗೂ ಒಂದು ಶೀಟಿನ ಮನೆಗಳಿವೆ. ಈ ಪೈಕಿ ಎರಡು ಮನೆಗಳ ಗೋಡೆ ಹಾಗೂ ಮೆಟ್ಟಿಲುಗಳ ಭಾಗವನ್ನು ತೆರವುಗೊಳಿಸಲಾಗಿದೆ.

ಎರಡು ಅಂತಸ್ತಿನ ಕಟ್ಟಡವನ್ನು ಮಳೆ ನೀರುಗಾಲುವೆಯ ಮೇಲೆ ನಿರ್ಮಾಣ ಮಾಡಿದ್ದು, ಮಾರ್ಕಿಂಗ್ ಮಾಡಿರುವ ಭಾಗದವರೆಗೆ ಗೋಡೆ ತೆರವು ಮಾಡಲು ಮುಂದಾದಾಗ ಮನೆಯ ಮಾಲಿಕರೇ ಸ್ವತಃ ತೆರವುಗೊಳಿಸುವುದಾಗಿ ತಿಳಿಸಿದರು. ಅದಕ್ಕೆ ಅಧಿಕಾರಿಗಳು ಸಮ್ಮತಿ ನೀಡಿ, ತ್ವರಿತ ತೆರವಿಗೆ ಸೂಚಿಸಿದ್ದಾರೆ. ಮನೆಯ ಗೋಡೆ ಭಾಗ ಹಾಗೂ ಕಾಂಪೌಂಡ್ ತೆರವುಗೊಳಿಸಲಾಗಿದೆ. ಒಂದು ಶೆಡ್ ಗೋಡೆ ಭಾಗವನ್ನು ತೆರವುಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.