ADVERTISEMENT

ಇಂಧನ ಉಳಿತಾಯಕ್ಕೆ ‘ನೆಟ್‌ ಜೀರೊ’ ಕಟ್ಟಡ ಅನಿವಾರ್ಯ: ರುದ್ರಪ್ಪಯ್ಯ

ಕೆ–ಇಸಿಬಿಸಿ ಕಾರ್ಯಾಗಾರದಲ್ಲಿ ‘ಕ್ರೆಡಲ್‌’ ಎಂ.ಡಿ. ರುದ್ರಪ್ಪಯ್ಯ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2025, 15:09 IST
Last Updated 5 ಏಪ್ರಿಲ್ 2025, 15:09 IST
ಕಾರ್ಯಾಗಾರದಲ್ಲಿ ರುದ್ರಪ್ಪಯ್ಯ ಮಾತನಾಡಿದರು.
ಕಾರ್ಯಾಗಾರದಲ್ಲಿ ರುದ್ರಪ್ಪಯ್ಯ ಮಾತನಾಡಿದರು.   

ಬೆಂಗಳೂರು: ಇಂಧನ ಸಂರಕ್ಷಣೆ ಮತ್ತು ಪಂಚಾಮೃತ ಗುರಿಗಳನ್ನು (ಹವಾಮಾನ ಬದಲಾವಣೆ ಎದುರಿಸಲು ಐದು ಅಂಶಗಳ ಕ್ರಿಯಾ ಯೋಜನೆ)ಸಾಧಿಸಲು ‘ನೆಟ್‌ ಜೀರೊ’ ಕಟ್ಟಡಗಳು ಅನಿವಾರ್ಯ ಎಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ಹೇಳಿದ್ದಾರೆ.

ನಗರದ ಕ್ರೆಡಲ್‌ ಕಚೇರಿಯಲ್ಲಿ ಆಯೋಜಿಸಿದ್ದ 'ಇಂಧನ ಸಂರಕ್ಷಣೆ ಕಟ್ಟಡ ಸಂಹಿತೆ(ಇಸಿಬಿಸಿ)‘ ಕುರಿತ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಬಿಇಇಯ (ಇಂಧನ ದಕ್ಷತೆ ಬ್ಯೂರೊ) ಇಂಧನ ಸಂರಕ್ಷಣೆ ಕಟ್ಟಡ ಸಂಹಿತೆ, 100 ಕಿಲೋ ವಾಟ್‌ ಅಥವಾ ಹೆಚ್ಚಿನ ಸಂಪರ್ಕಿತ ಲೋಡ್ ಹೊಂದಿರುವ ಹೊಸ ವಾಣಿಜ್ಯ ಕಟ್ಟಡಗಳಿಗೆ ಇಂಧನ ದಕ್ಷತೆಯ ನಿಯಮಗಳನ್ನು ನಿಗದಿಪಡಿಸಿದೆ. ಪರಿಸರ ಸ್ನೇಹಿ 'ನೆಟ್‌ ಜೀರೊ'(ನಿವ್ವಳ ಶೂನ್ಯ ಇಂಗಾಲ ಹೊಮ್ಮುವಿಕೆ) ಕಟ್ಟಡಗಳ ನಿರ್ಮಾಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇದು ಅತ್ಯಂತ ಮಹತ್ವದ್ದಾಗಿದೆ. ಈ ನಿಯಮಗಳ ಅಳವಡಿಕೆಯಿಂದ ಸಾಂಪ್ರದಾಯಿಕ ಇಂಧನದ ಬಳಕೆ ತಗ್ಗುತ್ತದೆ’ ಎಂದು ವಿವರಿಸಿದರು.

ADVERTISEMENT

‘ದೇಶದಲ್ಲಿ ವಾರ್ಷಿಕವಾಗಿ ಉತ್ಪಾದನೆಯಾಗುವ ಒಟ್ಟು ವಿದ್ಯುತ್ತಿನಲ್ಲಿ ಮೂರನೇ ಒಂದು ಭಾಗ ಕಟ್ಟಡಗಳಿಗೆ ಬಳಕೆಯಾಗುತ್ತಿದೆ. ಹಸಿರುಮನೆ ಅನಿಲ ಹೊರಸೂಸುವಿಕೆಯ ಅತಿದೊಡ್ಡ ಕಾರಣಗಳಲ್ಲಿ ಇದೂ ಒಂದಾಗಿದೆ. 2030ರ ವೇಳೆಗೆ ಹಸಿರುಮನೆ ಅನಿಲ ಹೊರಸೂಸುವಿಕೆ ಕಡಿಮೆ ಮಾಡಬೇಕಿರುವುದರಿಂದ ನೆಟ್ ಜೀರೊ ಕಟ್ಟಡಗಳಿಗೆ ಆದ್ಯತೆ ನೀಡುವುದು ಮುಖ್ಯವಾಗಿದೆ’ ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ‘ಇಸಿಬಿಸಿ’ ಮಾಸ್ಟರ್ ತರಬೇತುದಾರರಾದ ಕನಕರಾಜ್ ಗಣೇಶನ್ ಮತ್ತು ಕುಲದೀಪ್ ಕುಮಾರ್ ಸಾದೇವಿ ಅವರು ವಾಣಿಜ್ಯ ಕಟ್ಟಡಗಳಲ್ಲಿ ಇಂಧನ ದಕ್ಷತೆಯ ಮಾನದಂಡಗಳ ಅನುಸರಣೆಯ ಕುರಿತು ವಿವರಿಸಿದರು.

ನಗರಾಭಿವೃದ್ಧಿ ಇಲಾಖೆ, ಜಿಲ್ಲಾ ಮುನ್ಸಿಪಲ್ ಪ್ರಾಧಿಕಾರಗಳ (ಡಿಎಂಎ) ಅಡಿಯಲ್ಲಿ ಕಾರ್ಯನಿರ್ವಹಿಸುವ ನಗರ ಸ್ಥಳೀಯ ಸಂಸ್ಥೆಗಳು (ಯುಎಲ್‌ಬಿ), ಬಿಬಿಎಂಪಿಯೂ ಸೇರಿ ಸುಮಾರು 200 ಅಧಿಕಾರಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.