ADVERTISEMENT

ಮೆಟ್ರೊ ಮಾರ್ಗದ ಕಾಮಗಾರಿಗೆ 1342 ಮರಗಳ ಹನನಕ್ಕೆ ಹೈಕೋರ್ಟ್ ಅಸ್ತು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2022, 19:12 IST
Last Updated 20 ಏಪ್ರಿಲ್ 2022, 19:12 IST
   

ಬೆಂಗಳೂರು: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೊ ಮಾರ್ಗದ (ಎರಡನೇ ಹಂತದ 2–ಬಿ) ಕಾಮಗಾರಿಗೆ ಅಡ್ಡಿಯಾಗಿರುವ 1,342 ಮರಗಳನ್ನು ಕಡಿಯಲು ಹೈಕೋರ್ಟ್‌, ಬಿಎಂಆರ್‌ಸಿಎಲ್‌ಗೆ ಅನುಮತಿ ನೀಡಿದೆ.

ಮರ ಕಡಿಯುವುದಕ್ಕೆ ಆಕ್ಷೇಪಿಸಿ ‘ಬೆಂಗಳೂರು ಎನ್ವಿರಾನ್‌ಮೆಂಟ್‌ ಟ್ರಸ್ಟ್‌’ ಮತ್ತು ದತ್ತಾತ್ರೇಯ ದೇವರೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನುಮುಖ್ಯ ನ್ಯಾಯಮೂರ್ತಿ ಋತುರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಪ್ರದೀಪ್ ನಾಯಕ್, ‘ಮರಗಳ ಅಧಿಕಾರಿಯು ತಜ್ಞರ ಸಮಿತಿಯ ಭಾಗವಾಗಿರಬಾರದು. ಆದರೆ, ಇಲ್ಲಿ ಮರಗಳನ್ನು ಕಡಿಯಲು ಅಧಿಕೃತ ಅನುಮತಿ ನೀಡಿರುವ ಅಧಿಕಾರಿಯು ಮರಗಳ ಸಮಿತಿಯಲ್ಲೂ ಸ್ಥಾನ ಪಡೆದಿದ್ದಾರೆ. ಆದ್ದರಿಂದ, ಅಧಿಕಾರಿ ಭಾಗವಾಗಿರುವ ಮರ ತಜ್ಞರ ಸಮಿತಿ ಹಾಗೂ ಮರ ಅಧಿಕಾರಿ ನೀಡುವ ಒಪ್ಪಿಗೆ ಆಧರಿಸಿ ಮರ ತೆರವು ಅಥವಾ ಸ್ಥಳಾಂತರ ಮಾಡಬಾರದು’ ಎಂದು ಆಕ್ಷೇಪಿಸಿದರು.

ADVERTISEMENT

ಇದಕ್ಕೆ ಸರ್ಕಾರದ ಹೆಚ್ಚುವರಿ ವಕೀಲ ವಿಜಯಕುಮಾರ್‌ ಎ. ಪಾಟೀಲ, ‘ಮರಗಳ ತಜ್ಞರ ಸಮಿತಿಯ ವರದಿಯಲ್ಲಿ ಸಮಸ್ಯೆಯಿದ್ದರೆ ಒಪ್ಪಿಕೊಳ್ಳಬಹುದು. ಆದರೆ, ಅರ್ಜಿದಾರರ ಈ ರೀತಿಯ ಆಕ್ಷೇಪ ಸರಿಯಲ್ಲ’ ಎಂದರು.

ಬಿಎಂಆರ್‌ಸಿಎಲ್‌ಪರಹಿರಿಯ ವಕೀಲ ಉದಯ್ ಹೊಳ್ಳ ಅವರು, ‘2022ರ ಮಾರ್ಚ್ 8ರ ಮರ ತಜ್ಞರ ಸಮಿತಿಯ ವರದಿಯನ್ನು ಆಧರಿಸಿ ಕಸ್ತೂರಿ ನಗರ ಮತ್ತು ಕೆಂಪಾಪುರದ ಹೊರವರ್ತುಲ ರಸ್ತೆಯಲ್ಲಿನ ಮೆಟ್ರೊ ಮಾರ್ಗದಲ್ಲಿ ಬರುವ ಮರಗಳ ಸ್ಥಳಾಂತರ ಮತ್ತು ತೆರವು ನಡೆಯಬೇಕಿದೆ. ನಮ್ಮ ಮೆಟ್ರೊ ಯೋಜನೆ ವಿಳಂಬದಿಂದಾಗಿ, ಪ್ರತಿ ದಿನಕ್ಕೆ ₹2 ಕೋಟಿ ನಷ್ಟ ಉಂಟಾಗುತ್ತಿದೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಮೆಟ್ರೊ ರೈಲು ಮಾರ್ಗದ ಕಾಮಗಾರಿಗೆ ಅಡ್ಡಿಯಾಗಿರುವ ಮರಗಳನ್ನು ತೆರವುಗೊಳಿಸಲು ತಜ್ಞರ ಸಮಿತಿ ಶಿಫಾರಸಿನಂತೆ, ಒಟ್ಟು 1,600 ಮರಗಳನ್ನು ಕಡಿಯಬೇಕಾಗಿದ್ದು, 160 ಮರಗಳನ್ನು ಸ್ಥಳಾಂತರಿಸಬೇಕಿದೆ.

ಮರಗಳ ರಕ್ಷಣೆಯ ಸಾಧ್ಯತೆ ಮತ್ತು ಅದಕ್ಕೆ ಅನುಸರಿಸಬೇಕಾದ ಕಾರ್ಯವಿಧಾನ ಹಾಗೂ ಮಾರ್ಗಸೂಚಿಗಳನ್ನು ರೂಪಿಸಲು ತಜ್ಞರ ಸಮಿತಿ ರಚಿಸುವಂತೆ 2019ರ ಏಪ್ರಿಲ್‌ನಲ್ಲಿ ಹೈಕೋರ್ಟ್, ಸರ್ಕಾರಕ್ಕೆ ನಿರ್ದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.