ಬೆಂಗಳೂರು: ಭಾರತೀಯ ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್ ಮತ್ತು ಇತರರ ವಿರುದ್ಧ ಆಕ್ಷೇಪಾರ್ಹ ಬರಹ ಪ್ರಕಟಿಸಿದ್ದ ಆರೋಪದಡಿ ಟಿ.ಕೆ.ವಸಂತ್ ಕುಮಾರ್ (40) ಎಂಬಾತನನ್ನು ನಗರದ ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಮೈಸೂರಿನ ವಸಂತ್ ಕುಮಾರ್, ನಗರದ ಆಸ್ಪತ್ರೆಯೊಂದರ ಲ್ಯಾಬ್‌ನಲ್ಲಿ ತಂತ್ರಜ್ಞನಾಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ. ತಮಿಳುನಾಡಿನ ಕೂನೂರಿನಲ್ಲಿ ನಡೆದಿದ್ದ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿರುವ ಬಿಪಿನ್ ರಾವತ್ ಹಾಗೂ ಇತರರ ಬಗ್ಗೆ ತನ್ನ ಫೇಸ್‌ಬುಕ್ ಖಾತೆಯಲ್ಲಿ ಆಕ್ಷೇಪಾರ್ಹ ಬರಹ ಪ್ರಕಟಿಸಿದ್ದ. ಈ ಬಗ್ಗೆ ಪ್ರಕರಣ ದಾಖಲಾಗಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಬಿಪಿನ್ ರಾವತ್, ಮೋದಿ ಗುಲಾಮತನದ ಒಂದು ತಲೆಮಾರು. ಚೀನಾ ದೇಶ, ಭಾರತ ಗಡಿಯಲ್ಲಿ ಬಂದು ಹಳ್ಳಿಗಳನ್ನು ನಿರ್ಮಿಸಿದಾಗ ಮೋದಿಯಂತೆ ಬುಡಬುಡಿಕೆ ಹೇಳಿಕೆ ಕೊಟ್ಟ ವ್ಯಕ್ತಿ. ರಾವತ್ ಸಾವಿನಿಂದ ದೇಶವಂತೂ ಪಾರಾಗಿದೆ. ಅವರ ಜಾಗಕ್ಕೆ ನಿಜವಾದ ಒಬ್ಬ ಗಂಡು ಮಗ ಬರುತ್ತಾನೆಂಬ ನಂಬಿಕೆಯೊಂದಿಗೆ ನಾನು ಸಮಾಧಾನವಾಗಿದ್ದೇನೆ’ ಎಂಬುದಾಗಿ ಆರೋಪಿ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದ.
‘ಭಾರತೀಯ ಸೇನೆ ಬಗ್ಗೆ ದುರುದ್ದೇಶದಿಂದ ಕೂಡಿದ ಪದಗಳನ್ನು ಬಳಸಿ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಉದ್ದೇಶ ಆರೋಪಿಯದ್ದಾಗಿದೆ. ವಸಂತ್ ಕುಮಾರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದು ಬೆಂಗಳೂರು ಪೊಲೀಸ್ ಕಮಾಂಡ್ ಕೇಂದ್ರದ ಪಿಎಸ್‌ಐ ದೂರು ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.