
ಬೆಂಗಳೂರು: ನಗರದ ಕಬ್ಬನ್ ರಸ್ತೆಯಲ್ಲಿರುವ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಮಟ್ಟದ ಗಣರಾಜ್ಯೋತ್ಸವಕ್ಕೆ ಸರ್ವ ಸಿದ್ಧತೆಯಾಗಿದ್ದು, ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಸೋಮವಾರ ಗೌರವರಕ್ಷೆ ಸ್ವೀಕರಿಸಿ, ಸಂದೇಶ ನೀಡಲಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಗಣರಾಜ್ಯೋತ್ಸವ ಪೂರ್ವಭಾವಿ ಸಿದ್ಧತೆಗಳು ಹಾಗೂ ಕಾರ್ಯಕ್ರಮದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದರು.
ಸೋಮವಾರ ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣ ಮಾಡುತ್ತಾರೆ. ಗೌರವರಕ್ಷೆ ಸ್ವೀಕರಿಸಿ, ನಾಡಿನ ಜನತೆಗೆ ಗಣರಾಜ್ಯೋತ್ಸವದ ಸಂದೇಶ ನೀಡುತ್ತಾರೆ. ಪಥಸಂಚಲನ, ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದ್ದಾರೆ. ಇದಾದ ನಂತರ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಿಗೆ, ರಾಜ್ಯಪಾಲರು ಬಹುಮಾನ ವಿತರಿಸಲಿದ್ದಾರೆ ಎಂದು ಮಹೇಶ್ವರ್ ರಾವ್ ತಿಳಿಸಿದರು.
ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ನಾಗರಿಕರು ವೀಕ್ಷಿಸಲು, ಆನ್‌ಲೈನ್ ಮೂಲಕ 2000 ಇ–ಪಾಸ್‌ಗಳನ್ನು ವಿತರಿಸಲಾಗಿದೆ. ಅದಲ್ಲದೆ, 2000 ಪ್ರತ್ಯೇಕ ಪಾಸ್‌ಗಳನ್ನೂ ನೀಡಲಾಗಿದೆ. ಗಣ್ಯರಿಗೆ 3000 ಪಾಸ್, ಆಡಳಿತಾಧಿಕಾರಿಗಳು, ಮಾಧ್ಯದವರಿಗೆ 3200 ಪಾಸ್ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪಥಸಂಚಲನ: ತಮಿಳುನಾಡು ರಾಜ್ಯ ಪೊಲೀಸ್ ತಂಡ ಸೇರಿದಂತೆ ಸೇನೆ, ವಾಯುಸೇನೆ, ಸಿಆರ್‌ಪಿಎಫ್ ಮಹಿಳಾ, ಸ್ಕೌಟ್ಸ್– ಗೈಡ್ಸ್, ಎನ್‌ಸಿಸಿ, ಸೇವಾದಳಗಳಿಂದ ಕವಾಯತು, ಬ್ಯಾಂಡ್ ನಡೆಸಿಕೊಡಲಿದ್ದರೆ. 37 ತುಕಡಿಗಳಲ್ಲಿ ಸುಮಾರು 1,100 ಮಂದಿ ಭಾಗವಹಿಸಲಿದ್ದಾರೆ ಎಂದು ಸೀಮಾಂತ್‌ಕುಮಾರ್ ಸಿಂಗ್ ತಿಳಿಸಿದರು.
ಮೈದಾನದ ಸುತ್ತಮುತ್ತ ಭದ್ರತೆ ಮತ್ತು ಸುರಕ್ಷತೆಗೆ 100 ಸಿಸಿಟಿವಿ ಕ್ಯಾಮೆರಾ, ನಾಲ್ಕು ಬ್ಯಾಗ್ ಸ್ಕ್ಯಾನರ್ ವ್ಯವಸ್ಥೆ ಕಲ್ಪಿಸಲಾಗಿದೆ. ಆಂಬುಲೆನ್ಸ್, ವೈದ್ಯಕೀಯ ಸಿಬ್ಬಂದಿ ಸ್ಥಳದಲ್ಲಿರಲಿದ್ದಾರೆ ಎಂದು ಮಾಹಿತಿ ನೀಡಿದರು.
1400 ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ
ಗೀತಾ ಭತ್ತದ್ ಮತ್ತು ತಂಡದವರಿಂದ ನಾಡಗೀತೆ ಹಾಗೂ ರೈತಗೀತೆ ಗಾಯನ ನಡೆಯಲಿದ್ದು ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ಹೇರೋಹಳ್ಳಿಯ ಸಂಯುಕ್ತ ಪದವಿ ಪೂರ್ವ ಕಾಲೇಜಿನ 650 ಮಕ್ಕಳಿಂದ ‘ಸಂಕ್ರಾಂತಿ ಸಂಭ್ರಮ’ ನಡೆಯಲಿದೆ. ಬಾಗಲಗುಂಟೆ ಸರ್ಕಾರಿ ಪ್ರೌಢ ಶಾಲೆಯ 750 ಮಕ್ಕಳು ‘ಭಾರತದ ಏಕೀಕರಣ ಮತ್ತು ನವ ಭಾರತ’ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಪೊಲೀಸ್ ಇಲಾಖೆ ವತಿಯಿಂದ ‘ಕರ್ನಾಟಕ ಪೊಲೀಸ್ ಸಾಮೂಹಿಕ ವಾದ್ಯಮೇಳ’ ನಡೆಯಲಿದೆ.
ಸಂಚಾರ ಮಾರ್ಗ ಬದಲು
ಜ.26ರ ಬೆಳಿಗ್ಗೆ 8.30ರಿಂದ 10.30ರವರೆಗೆ ಕಬ್ಬನ್ ರಸ್ತೆಯಲ್ಲಿ ಬಿಆರ್‌ವಿ ಜಂಕ್ಷನ್‌ನಿಂದ ಕಾಮರಾಜ ರಸ್ತೆ ಜಂಕ್ಷನ್‌ವರೆಗಿನ ಎರಡೂ ದಿಕ್ಕುಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಇನ್‌ಫೆಂಟ್ರಿ ರಸ್ತೆಯಲ್ಲಿ ಮಣಿಪಾಲ್ ಸೆಂಟರ್ ಕಡೆಗೆ ಸಂಚರಿಸುವ ವಾಹನಗಳು ಇನ್‌ಫೆಂಟ್ರಿ ರಸ್ತೆ– ಸಫೀನಾ ಪ್ಲಾಜಾ ಎಡ ತಿರುವು ಪಡೆದು ಮೈನ್‌ಗಾರ್ಡ್ ರಸ್ತೆ– ಆಲೀಸ್ ವೃತ್ತ– ಡಿಸ್ಪೆನ್ಸರಿ ರಸ್ತೆ– ಕಾಮರಾಜ ರಸ್ತೆ ಮತ್ತು ಡಿಕನ್ಸನ್ ರಸ್ತೆ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಕಾಮರಾಜ ರಸ್ತೆ– ಕಬ್ಬನ್ ರಸ್ತೆ ಮತ್ತು ಕಾಮರಾಜ ರಸ್ತೆ ಜಂಕ್ಷನ್‌ನಲ್ಲಿ ಎಡಕ್ಕೆ ತಿರುವು ಪಡೆದು ಕಬ್ಬನ್‌ರಸ್ತೆ ಮೂಲಕ ಮಣಿಪಾಲ್ ಸೆಂಟರ್ ಕಡೆಗೆ ಸಾಗಬಹುದು. ಸೆಂಟ್ರಲ್ ಸ್ಟ್ರೀಟ್ ಅನಿಲ್‌ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣದವರೆಗೆ; ಕಬ್ಬನ್ ರಸ್ತೆ ಸಿಟಿಒ ವೃತ್ತದಿಂದ ಕೆ.ಆರ್. ರಸ್ತೆ– ಕಬ್ಬನ್ ರಸ್ತೆ ಜಂಕ್ಷನ್‌ವರೆಗೆ; ಎಂ.ಜಿ ರಸ್ತೆ ಅನಿಲ್‌ಕುಂಬ್ಳೆ ವೃತ್ತದಿಂದ ಕ್ವೀನ್ಸ್ ರಸ್ತೆವರೆಗೆ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.