
ಬೆಂಗಳೂರು: ಕಬ್ಬನ್ ರಸ್ತೆಯ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಕವಾಯತು ಮೈದಾನದಲ್ಲಿ ಜನವರಿ 26ರಂದು ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಲಿರುವ ಕಾರಣ ಸುತ್ತಮುತ್ತಲ ರಸ್ತೆಗಳ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.
ಬೆಳಿಗ್ಗೆ 8.30ರಿಂದ 10.30ರವರೆಗೆ ಕಬ್ಬನ್ ರಸ್ತೆಯ ಬಿಆರ್‌ವಿ ಜಂಕ್ಷನ್‍ನಿಂದ ಕಾಮರಾಜ ರಸ್ತೆ ಜಂಕ್ಷನ್‍ವರೆಗೆ ಎರಡೂ ದಿಕ್ಕುಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಸುಗಮ ಸಂಚಾರದ ದೃಷ್ಟಿಯಿಂದ ಈ ಮಾರ್ಪಾಡು ಮಾಡಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್‍ಫೆಂಟ್ರಿ ರಸ್ತೆಯಲ್ಲಿ ಮಣಿಪಾಲ್ ಸೆಂಟರ್ ಕಡೆಗೆ ಸಂಚರಿಸುವ ವಾಹನಗಳು ಸಫೀನಾ ಪ್ಲಾಜಾ ಬಳಿ ಎಡಕ್ಕೆ ತಿರುಗಿ ಮೈನ್‍ಗಾರ್ಡ್, ಆಲೀಸ್ ಸರ್ಕಲ್, ಡಿಸ್ಪೆನ್ಸರಿ ರಸ್ತೆ, ಕಾಮರಾಜ ರಸ್ತೆ ಮೂಲಕ ಬಂದು ಡಿಕನ್ಸನ್ ರಸ್ತೆ ಜಂಕ್ಷನ್‍ನಲ್ಲಿ ಬಲಕ್ಕೆ ತಿರುಗಬೇಕು. ಬಳಿಕ ಕಾಮರಾಜ ರಸ್ತೆ, ಕಬ್ಬನ್ ರಸ್ತೆಯಲ್ಲಿ ಸಾಗಿ ಕಾಮರಾಜ ರಸ್ತೆ ಜಂಕ್ಷನ್‍ನಲ್ಲಿ ಎಡ ತಿರುವು ಪಡೆದು ಮಣಿಪಾಲ್ ಸೆಂಟರ್ ಕಡೆಗೆ ಹೋಗಬೇಕು.
ಕಬ್ಬನ್ ರಸ್ತೆಯಲ್ಲಿ ಮಣಿಪಾಲ್ ಸೆಂಟರ್ ಜಂಕ್ಷನ್‍ನಿಂದ ಬಿಆರ್‌ವಿ ಜಂಕ್ಷನ್ ಕಡೆಗೆ ಬರುವ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಈ ಮಾರ್ಗದ ಬದಲು ವೆಬ್ ಜಂಕ್ಷನ್ ಬಳಿ ಬಲ ತಿರುವು ಪಡೆದು ಎಂ.ಜಿ.ರಸ್ತೆ, ಮೆಯೋ ಹಾಲ್, ಕಾವೇರಿ ಎಂಪೋರಿಯಂ ಕಡೆಗೆ ಬಂದು ಅನಿಲ್ ಕುಂಬ್ಳೆ ವೃತ್ತದಲ್ಲಿ ಬಲ ತಿರುವು ಪಡೆದು ಮುಂದೆ ಸಾಗಬೇಕು.
ಅನಿಲ್ ಕುಂಬ್ಳೆ ವೃತ್ತದಿಂದ ಕಬ್ಬನ್ ರಸ್ತೆ ಕಡೆಗೆ ಹೋಗುವ ವಾಹನಗಳು ಸೆಂಟ್ರಲ್ ಸ್ಟ್ರೀಟ್‍ನಲ್ಲಿ ಸಾಗಿ ಬಲ ತಿರುವು ಪಡೆದು ಇನ್‍ಫೆಂಟ್ರಿ ರಸ್ತೆ, ಸಫೀನಾ ಪ್ಲಾಜಾ ಬಳಿ ಬಂದು ಎಡಕ್ಕೆ ತಿರುವು ಪಡೆದು ಮೈನ್‍ಗಾರ್ಡ್, ಆಲೀಸ್ ಸರ್ಕಲ್ , ಡಿಸ್ಪೆನ್ಸರಿ ರಸ್ತೆ, ಕಾಮರಾಜ ರಸ್ತೆ, ಡಿಕನ್ಸನ್ ರಸ್ತೆ ಜಂಕ್ಷನ್‍ನಲ್ಲಿ ಬಲಕ್ಕೆ ತಿರುಗಬೇಕು. ನಂತರ ಕಾಮರಾಜ ರಸ್ತೆ ಜಂಕ್ಷನ್‍ನಲ್ಲಿ ಎಡ ತಿರುವು ಪಡೆದು ಮಣಿಪಾಲ್ ಸೆಂಟರ್ ಕಡೆಗೆ ಹೋಗಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.