ADVERTISEMENT

ನೋಂದಣಿಯಾಗದ ಯೋಜನೆಗಳಲ್ಲಿ ಹಣ ಹೂಡಿದವರಿಗೆ ಸಂಕಷ್ಟ

ರೇರಾ ಅಡಿ ನೋಂದಣಿಯಾಗದ 1,044 ಯೋಜನೆಗಳು * ಬಿಲ್ಡರ್‌ಗಳ ಬಳಿ ಸಿಕ್ಕಿಹಾಕಿಕೊಂಡಿದೆ ₹30 ಸಾವಿರ ಕೋಟಿ !

ಗುರು ಪಿ.ಎಸ್‌
Published 3 ಡಿಸೆಂಬರ್ 2020, 21:55 IST
Last Updated 3 ಡಿಸೆಂಬರ್ 2020, 21:55 IST
ಕೆ.ಎಸ್. ಲತಾಕುಮಾರಿ
ಕೆ.ಎಸ್. ಲತಾಕುಮಾರಿ   

ಬೆಂಗಳೂರು: ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ (ಕೆ–ರೇರಾ) ಅಡಿ ನೋಂದಣಿಯಾಗದ ಯೋಜನೆಗಳಲ್ಲಿ ಹೂಡಿಕೆ ಮಾಡಿದವರು, ಹಣವೂ ಇಲ್ಲದೆ, ಮನೆಯೂ ಸಿಗದೆ ಪರದಾಡುತ್ತಿದ್ದಾರೆ.

‘ರೇರಾದ ವೆಬ್‌ಸೈಟ್‌ನಲ್ಲಿ ಇರುವ ಮಾಹಿತಿಯಂತೆಯೇ ರಾಜ್ಯದಲ್ಲಿ 1,044 ಯೋಜನೆಗಳು ನೋಂದಣಿಯಾಗಿಲ್ಲ. ಒಂದು ಯೋಜನೆಯಲ್ಲಿ ಕನಿಷ್ಠ 150 ಮನೆಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೂ ಕನಿಷ್ಠ 1.5 ಲಕ್ಷ ಜನ ಇದರಲ್ಲಿ ಹೂಡಿಕೆ ಮಾಡಿದ್ದಾರೆ. ಶೇ 50ರಷ್ಟು ಹಣ ನೀಡಿದ್ದರೂ ₹30 ಸಾವಿರ ಕೋಟಿಗೂ ಹೆಚ್ಚು ಮೊತ್ತ ಡೆವಲಪರ್‌ಗಳ ಬಳಿ ಸಿಕ್ಕಿ ಹಾಕಿಕೊಂಡಿದೆ. ಮನೆಯೂ ಸಿಗದೆ, ಹಣವೂ ಇಲ್ಲದೆ ಖರೀದಿದಾರರು ಪರದಾಡುತ್ತಿದ್ದಾರೆ’ ಎಂದು ಫೋರಂ ಫಾರ್‌ ಪೀಪಲ್‌ ಕಲೆಕ್ಟಿವ್ ಎಫರ್ಟ್‌ನ (ಎಫ್‌ಎಫ್‌ಪಿಸಿಎ) ಎಂ.ಎಸ್. ಶಂಕರ್‌ ದೂರಿದರು.

‘ಈ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲ ಅಥವಾ ಬಿಲ್ಡರ್‌ಗಳು ಯಾವುದೇ ಮಾಹಿತಿ ನೀಡಿಲ್ಲ ಎಂದು ವೆಬ್‌ಸೈಟ್‌ನಲ್ಲಿ ಹಾಕುತ್ತಾರೆ. ಆದರೆ, ಈ ಬಿಲ್ಡರ್‌ಗಳು ಕಟ್ಟಡ ನಿರ್ಮಾಣ ಕಾರ್ಯ ನಡೆಸುತ್ತಿರುವುದು ಕಣ್ಣೆದುರೇ ಕಾಣುತ್ತದೆ. ಆದರೂ ರೇರಾ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಖರೀದಿದಾರರಿಗೆ ಮಾತ್ರ ಗಡುವಿನೊಳಗೆ ಮನೆ ನೀಡುತ್ತಿಲ್ಲ’ ಎಂದು ಅವರು ದೂರುತ್ತಾರೆ.

ADVERTISEMENT

‘2017ರ ನಂತರ ಪ್ರಾರಂಭವಾದ ಯೋಜನೆಗಳ ವಿರುದ್ಧವೂ ರೇರಾ ಕ್ರಮ ತೆಗದುಕೊಂಡಿಲ್ಲ. ಏಕೆ ನೋಂದಣಿ ಮಾಡಿಸಿಲ್ಲ ಎಂದು ಬಿಲ್ಡರ್‌ಗಳನ್ನು ಪ್ರಶ್ನಿಸಬೇಕು. ಕೇವಲ ನೋಟಿಸ್ ನೀಡುತ್ತಾರೆ. ಕೊನೆಗೆ ‘ನೋ ರಿಪ್ಲೇ’ ಎಂದು ಬರೆದು ಕೈತೊಳೆದುಕೊಳ್ಳುತ್ತಾರೆ. ಲಕ್ಷಾಂತರ ಖರೀದಿದಾರರ ಅಳಲು ಕೇಳುವವರು ಯಾರು’ ಎಂದು ಅವರು ಪ್ರಶ್ನಿಸುತ್ತಾರೆ.

‘ರೇರಾಗೆ ಹಲವು ಬಾರಿ ಈ ಬಗ್ಗೆ ದೂರು ನೀಡಲಾಗಿದೆ. ಬಿಬಿಎಂಪಿ, ಬಿಡಿಎ ಜೊತೆ ಸೇರಿ ಇನ್‌ಸ್ಪೆಕ್ಟರ್‌ ದರ್ಜೆ ಅಧಿಕಾರಿಗಳು ಇರುವ ಕಾರ್ಯಪಡೆ ರಚಿಸಿ, ಈ ಬಿಲ್ಡರ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದೆವು. ಪ್ರಾಧಿಕಾರ ಈ ನಿಟ್ಟಿನಲ್ಲಿ ಮುಂದುವರಿಯಲೇ ಇಲ್ಲ’ ಎಂದು ಅವರು ಹೇಳಿದರು.

‘ನೋಂದಣಿ ಮಾಡಿಸದ ಬಿಲ್ಡರ್‌ಗಳು ರೇರಾದ ಯಾವುದೇ ನಿಯಮಗಳನ್ನು ಪಾಲಿಸುವುದಿಲ್ಲ. ಇಂತಹ ಯೋಜನೆಗಳ ಮಾಹಿತಿಯೂ ಖರೀದಿದಾರರಿಗೆ ಸಿಗುವುದಿಲ್ಲ. ತಿಳಿಯದೆ ಹೂಡಿಕೆ ಮಾಡಿದವರ ಹಣಕ್ಕೆ ಭದ್ರತೆಯೂ ಇರುವುದಿಲ್ಲ. ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ರೇರಾ ಕಾರ್ಯಕರ್ತರಾದ ಭಾಗ್ಯಲಕ್ಷ್ಮಿ ಅಯ್ಯರ್ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.