ADVERTISEMENT

ಜನೋಪಯೋಗಿ ಸಂಶೋಧನೆ ಅಗತ್ಯ: ಸೇನಾಪತಿ ‘ಕ್ರಿಸ್‌’ ಗೋಪಾಲಕೃಷ್ಣನ್‌

ಘಟಿಕೋತ್ಸವದಲ್ಲಿ ಐಐಎಸ್‌ಸಿ ಕೌನ್ಸಿಲ್‌ ಅಧ್ಯಕ್ಷ ಸೇನಾಪತಿ ‘ಕ್ರಿಸ್‌’ ಗೋಪಾಲಕೃಷ್ಣನ್‌

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 14:46 IST
Last Updated 11 ಜುಲೈ 2025, 14:46 IST
ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ವಿವಿಧ ವಿಭಾಗಗಳಲ್ಲಿ ಚಿನ್ನದ ಪದಕ ಪಡೆದ 84 ವಿದ್ಯಾರ್ಥಿಗಳಿಗೆ ಶುಕ್ರವಾರ ಪದಕ ಮತ್ತು ಪದವಿ ಪ್ರದಾನ ಮಾಡಲಾಯಿತು
ಪ್ರಜಾವಾಣಿ ಚಿತ್ರ
ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ವಿವಿಧ ವಿಭಾಗಗಳಲ್ಲಿ ಚಿನ್ನದ ಪದಕ ಪಡೆದ 84 ವಿದ್ಯಾರ್ಥಿಗಳಿಗೆ ಶುಕ್ರವಾರ ಪದಕ ಮತ್ತು ಪದವಿ ಪ್ರದಾನ ಮಾಡಲಾಯಿತು ಪ್ರಜಾವಾಣಿ ಚಿತ್ರ   

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಜಗತ್ತಿನಲ್ಲಿ ಮೊದಲ ಸ್ಥಾನ ಪಡೆಯುವಂತಾಗಬೇಕು. ಇಲ್ಲಿ ನಡೆಯುವ ಸಂಶೋಧನೆಗಳು ಜನರ ಉಪಯೋಗಕ್ಕೆ ಸಿಗುವಂತಾಗಬೇಕು ಎಂದು ಐಐಎಸ್‌ಸಿ ಕೌನ್ಸಿಲ್‌ ಅಧ್ಯಕ್ಷ ಸೇನಾಪತಿ ‘ಕ್ರಿಸ್‌’ ಗೋಪಾಲಕೃಷ್ಣನ್‌ ತಿಳಿಸಿದರು.

ಶುಕ್ರವಾರ ನಡೆದ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.

ಬಹುಶಿಸ್ತೀಯ ಸಂಶೋಧನೆಗಳನ್ನು ನಡೆಸಿದಾಗ ಅವುಗಳು ಕೈಗಾರಿಕೆಗಳಲ್ಲಿ ಬಳಕೆಯಾಗುತ್ತವೆ. ಯಾವುದೇ ಸಂಶೋಧನೆ ಮಾರುಕಟ್ಟೆಗೆ ಹೋಗಬೇಕು ಎಂದು ಆಶಿಸಿದರು.

ADVERTISEMENT

‘ಶತಮಾನದ ಹಿಂದೆ ಐಐಎಸ್‌ಸಿ ಪ್ರಾರಂಭವಾದಾಗ, ಕೇವಲ ಎರಡು ಶೈಕ್ಷಣಿಕ ಕಾರ್ಯಕ್ರಮಗಳಿದ್ದವು. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸೇರಿ ಕೇವಲ 30 ಜನರು ಕ್ಯಾಂಪಸ್‌ನಲ್ಲಿದ್ದರು. ಇಂದು 6,000 ಜನರಿರುವ ದೊಡ್ಡ ಸಂಸ್ಥೆಯಾಗಿ ಬೆಳೆದಿದೆ, ಸುಧಾರಿತ ಸಂಯೋಜಿತ ಕಾರ್ಯಕ್ರಮಗಳು ಮತ್ತು ಉದ್ಯಮ-ಕೇಂದ್ರಿತ ಕೌಶಲ್ಯ ಅಭಿವೃದ್ಧಿ ಸೇರಿದಂತೆ ಸುಮಾರು 800 ಕೋರ್ಸ್‌ಗಳಿವೆ. ಹೊಸ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಕಾರ್ಯಕ್ರಮಗಳನ್ನು ಮುಂದಿನ ವರ್ಷ ಆರಂಭಿಸಲಾಗುವುದು’ ಎಂದು ಅವರು ಹೇಳಿದರು.

ಪದವಿ ಪ್ರದಾನ ಮಾಡಿ ಮಾತನಾಡಿದ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದ ಗಣಿತ ಪ್ರಾಧ್ಯಾಪಕ ಮಂಜುಲ್ ಭಾರ್ಗವ, ‘ಪದವಿ ಪಡೆದವರು ವೈಜ್ಞಾನಿಕ ಚಿಂತನೆ ಇಟ್ಟುಕೊಂಡು ಸಮಸ್ಯೆಗಳನ್ನು ಪರಿಹರಿಸಲು ಸಜ್ಜಾಗಬೇಕು. ಯಾವುದೇ ಕೆಲಸವನ್ನು ಮಾಡುವಾಗ ಅದರಲ್ಲಿ ತಜ್ಞರಾಗಬೇಕು. ಹಿಂದಿನ ಚಿಂತನೆ, ನಿರೀಕ್ಷೆಗಳನ್ನು ಮೀರಿ ಹೊಸ, ಭಿನ್ನ ಚಿಂತನೆಗೆ ತೆರೆದುಕೊಳ್ಳಬೇಕು. ಹೊಸತನ ಮತ್ತು ಸೃಜನಶೀಲರಾಗಿ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

‘ಜ್ಞಾನವನ್ನು ವೈಯಕ್ತಿಕ ಸಾಧನೆಗೆ ಸೀಮಿತಗೊಳಿಸಬಾರದು. ಸಮಾಜದ ಮತ್ತು ವೈಜ್ಞಾನಿಕ ಪ್ರಗತಿಗೂ ನಿಮ್ಮ ಜ್ಞಾನ ಬಳಕೆಯಾಗಬೇಕು. ಅಂತರಶಿಸ್ತೀಯ ಕಲಿಕೆ, ಸಂಶೋಧನೆ, ವೈದ್ಯಕೀಯ ಶಿಕ್ಷಣ ಮತ್ತು ಉದ್ಯಮದದ ಕಡೆಗೆ ಗಮನ ನೀಡಬೇಕು’ ಎಂದು ಹೇಳಿದರು.

1,487 ಮಂದಿಗೆ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಪದವಿ, 106 ಮಂದಿಗೆ ಪದವಿ ಸೇರಿದಂತೆ ಒಟ್ಟು 1,593 ಮಂದಿಗೆ ಪದವಿ ಪ್ರದಾನ ಮಾಡಲಾಯಿತು. ಅತ್ಯುತ್ತಮ ಸಾಧನೆ ತೋರಿದ 84 ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ನೀಡಲಾಯಿತು.

ಡೀನ್‌ಗಳಾದ ಗೋವಿಂದ ರಂಗರಾಜನ್‌, ಅಶೋಕ ಸುಂದರರಾಜನ್‌, ವಿವಿಧ ವಿಭಾಗಗಳ ಮುಖ್ಯಸ್ಥರು, ನಿರ್ದೇಶಕರು ಉಪಸ್ಥಿತರಿದ್ದರು.

ಜೀವ ಕಳೆದುಕೊಂಡಿರುವ ಚಿನ್ನದ ಪದಕದ ವಿದ್ಯಾರ್ಥಿ

ಎರಡು ತಿಂಗಳ ಹಿಂದೆ ಅಗರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಸೋಮವಂಶಿ ನಿಖಿಲ್‌ ಚೋಟು ಅವರು ಬಿಸಿನೆಸ್ ಅನಾಲಿಟಿಕ್ಸ್‌ನಲ್ಲಿ 2023–24ನೇ ಸಾಲಿನಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. ವಿವಿಧ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ತೋರಿದ 84 ವಿದ್ಯಾರ್ಥಿಗಳ ಪಟ್ಟಿಯಲ್ಲಿ ಅವರ ಹೆಸರೂ ಇತ್ತು. ಸೋಮವಂಶಿ ಪರವಾಗಿ ಚಿನ್ನದ ಪದಕ ಸ್ವೀಕರಿಸಲು ಹೆತ್ತವರು ಇದ್ದರೆ ಬನ್ನಿ ಎಂದು ಘಟಿಕೋತ್ಸವದಲ್ಲಿ ತಿಳಿಸಲಾಯಿತು. ಹೆತ್ತವರು ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಮಹಾರಾಷ್ಟ್ರದ ಜಲಗಾಂವ್ ನಿವಾಸಿಯಾಗಿದ್ದ ಸೋಮವಂಶಿ ಮೇ 7ರಂದು ಜೀವ ಕಳೆದುಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.