ADVERTISEMENT

ಸಂಶೋಧಕ ಹನಿಯೂರು ಚಂದ್ರೇಗೌಡಗೆ ಜೀವ ಬೆದರಿಕೆ: ಇಬ್ಬರ ವಿರುದ್ಧ ಎಫ್‌ಐಆರ್‌

ಸಂಶೋಧಕ ಹನಿಯೂರು ಚಂದ್ರೇಗೌಡಗೆ ಜೀವ ಬೆದರಿಕೆ, ಪೊಲೀಸರಿಂದ ತನಿಖೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 15:41 IST
Last Updated 8 ಜನವರಿ 2026, 15:41 IST
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)   

ಬೆಂಗಳೂರು: ಜಾನಪದ, ಬುಡಕಟ್ಟು ಸಂಶೋಧಕರೂ ಆಗಿರುವ ಬೆಂಗಳೂರು ದಕ್ಷಿಣ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಹನಿಯೂರು ಚಂದ್ರೇಗೌಡ ಅವರನ್ನು ಅಪಹರಿಸಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ರಾಜರಾಜೇಶ್ವರನಗರ ಪೊಲೀಸ್ ಠಾಣೆಯಲ್ಲಿ ಬುಧವಾರ ಎಫ್‌ಐಆರ್ ದಾಖಲಾಗಿದೆ.

ರಾಜ್ಯ ಎನ್ಎಸ್ಎಸ್ ಅಧಿಕಾರಿ ಪ್ರತಾಪ್ ಲಿಂಗಯ್ಯ ಮತ್ತು ಅವರ ಸಹಚರ ಫಣೀಂದ್ರ ಪ್ರಸಾದ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್‌ಗಳಾದ 352, 351(2), ಆರ್/ಡ್ಲ್ಯು 3(5) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಚಂದ್ರೇಗೌಡ ಅವರು ಡಿ.17ರಂದೇ ದೂರು ನೀಡಿದ್ದರು. ಆ ದೂರು ಆಧರಿಸಿ ಪೊಲೀಸರು, ಎನ್‌ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಿಸಿಕೊಂಡಿದ್ದರು. ಬಳಿಕ, ಎಫ್‌ಐಆರ್ ದಾಖಲಿಸಲು ಪೊಲೀಸರಿಗೆ ಸೂಚನೆ ನೀಡುವಂತೆ 46ನೇ ಎಸಿಜೆಎಂ ನ್ಯಾಯಾಲಯಕ್ಕೆ ದೂರುದಾರರು ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದ ಸೂಚನೆ ಮೇರೆಗೆ ಈಗ ಎಫ್‌ಐಆರ್ ದಾಖಲಾಗಿದೆ ಎಂದು ಮೂಲಗಳು ಹೇಳಿವೆ.

ADVERTISEMENT

‘ಫಣೀಂದ್ರ ಪ್ರಸಾದ್ ಅವರು ಡಿ.17ರಂದು ಕರೆ ಮಾಡಿದ್ದರು. ‘ನಾನು ನಿಮ್ಮ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದೇನೆ. ನೀವು ಪ್ರತಾಪ್‌ ಲಿಂಗಯ್ಯ ಅವರ ವಿರುದ್ಧ ಆರ್‌ಟಿಐ ಮೂಲಕ ಮಾಹಿತಿ ಕೇಳುತ್ತಿದ್ದೀರಿ. ನಮ್ಮನ್ನು ಕೆಣಕಿ ನೀವು ಉಳಿಯಲು ಸಾಧ್ಯವಿಲ್ಲ. ನೀವು ಯಾವ ಐಪಿಎಸ್‌, ಕಮಿಷನರ್ ಹತ್ತಿರ ಹೋಗ್ತೀರಾ ಹೋಗಿ. ಆದರೆ, ನಿಮ್ಮನ್ನು ಬಿಡುವುದಿಲ್ಲ’ ಎಂದು ಫಣೀಂದ್ರ ಪ್ರಸಾದ್ ಅವರು ಬೆದರಿಕೆ ಹಾಕಿದ್ದರು ಎಂಬುದಾಗಿ ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

‘ನಂತರ ಫಣೀಂದ್ರ ಅವರು ಪದೇ ಪದೇ ಕರೆ ಮಾಡಿ, ಪ್ರತಾಪ್‌ ಲಿಂಗಯ್ಯ ಅವರ ವಿರುದ್ಧ ಹಾಕಿರುವ ಆರ್‌ಟಿಐ ಕುರಿತ ಅರ್ಜಿಯನ್ನು ವಾಪಸ್ ತೆಗೆದುಕೊಂಡು ಸುಮ್ಮನಿರಬೇಕು. ವಾಪಸ್ ತೆಗೆದುಕೊಳ್ಳದಿದ್ದರೆ ತಮ್ಮನ್ನು ಅಪಹರಿಸಿ ಮುಗಿಸದೇ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯ ಎನ್ಎಸ್ಎಸ್ ಅಧಿಕಾರಿ ನೇಮಕಾತಿಯಲ್ಲಿ ಆಗಿರುವ ಅಕ್ರಮಗಳ ಕುರಿತು ಮಾಹಿತಿ ಒದಗಿಸಿ, ತನಿಖೆ ನಡೆಸುವಂತೆ ಕೇಂದ್ರ ಹಾಗೂ ರಾಜ್ಯದ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಹನಿಯೂರು ಚಂದ್ರೇಗೌಡ ಅವರು ಪತ್ರ ಬರೆದಿದ್ದರು. ಪತ್ರ ಬರೆದಿರುವ ಕಾರಣಕ್ಕೆ ಪ್ರತಾಪ್ ಲಿಂಗಯ್ಯ, ಫಣೀಂದ್ರ ಪ್ರಸಾದ್ ಸೇರಿದಂತೆ ಇತರೆ ಇಬ್ಬರು ಬೆದರಿಕೆ ಹಾಕಿದ್ದಾರೆ. ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.