ADVERTISEMENT

ಬೇಡ ಜಂಗಮ ಹೆಸರಲ್ಲಿ ಮೀಸಲಾತಿ ಕಬಳಿಕೆ ಖಂಡನೀಯ: ಮಾರಸಂದ್ರ ಮುನಿಯಪ್ಪ

​ಪ್ರಜಾವಾಣಿ ವಾರ್ತೆ
Published 8 ಮೇ 2025, 15:52 IST
Last Updated 8 ಮೇ 2025, 15:52 IST
<div class="paragraphs"><p>ಮಾರಸಂದ್ರ ಮುನಿಯಪ್ಪ</p></div>

ಮಾರಸಂದ್ರ ಮುನಿಯಪ್ಪ

   

ಬೆಂಗಳೂರು: ಲಿಂಗಾಯತ–ವೀರಶೈವ ಸಮಾಜದ ಪೈಕಿ ಹೊನ್ನಾಳಿಯ ರೇಣುಕಾಚಾರ್ಯ ಮತ್ತು ಕೆಲವು ಮಠಾಧೀಶರು ಪರಿಶಿಷ್ಟ ಜಾತಿಗೆ ಲಭ್ಯ ಇರುವ ಮೀಸಲಾತಿಯನ್ನು ಬೇಡ ಜಂಗಮ, ಬುಡುಗ ಜಂಗಮ ಹೆಸರಲ್ಲಿ ಕಬಳಿಸಲು ಮುಂದಾಗಿದ್ದಾರೆ ಎಂದು ಆಲ್‌ ಇಂಡಿಯಾ ಬಹುಜನ ಸಮಾಜ ಪಾರ್ಟಿ ಆರೋಪಿಸಿದೆ.

ಈ ಸಮುದಾದವರು ಸಂಘವನ್ನು ರಚಿಸಿಕೊಂಡಿದ್ದು, ‘ಹಾಲಿ ನಡೆಯುತ್ತಿರುವ ಪರಿಶಿಷ್ಟ ಜಾತಿ ಜನಗಣತಿಯಲ್ಲಿ ಬೇಡ ಜಂಗಮ, ಬುಡುಗ ಜಂಗಮ ಎಂದು ನಮೂದಿಸುವಂತೆ ವ್ಯಾಪಕ ಪ್ರಚಾರ ಮಾಡುತ್ತಿದ್ದಾರೆ. ಈಗಾಗಲೇ ರೇಣುಕಾಚಾರ್ಯರ ಅಣ್ಣ ದಾರುಕೇಶ್ವರಯ್ಯ ಮತ್ತು ಅವರ ಮಕ್ಕಳು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರದ ಸವಲತ್ತು ಕಬಳಿಸಿದ್ದಾರೆ’ ಎಂದು ಪಕ್ಷದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ತಿಳಿಸಿದ್ದಾರೆ.

ADVERTISEMENT

ತೆಲಂಗಾಣ, ಆಂಧ್ರ, ಮಹಾರಾಷ್ಟ್ರದ ಗಡಿಭಾಗದಲ್ಲಿ ಇರುವ ಬೇಡ ಜಂಗಮರು ಮತ್ತು ಬುಡುಗ ಜಂಗಮರು ಮಾಂಸಾಹಾರಿಗಳಾಗಿದ್ದು, ಕಣಿ ಹೇಳುವ, ಬೇಟೆಯಾಡುವ ಕಾಯಕದಲ್ಲಿ ತೊಡಗಿದ್ದಾರೆ. ಹಂದಿ ಮತ್ತಿತರ ಪ್ರಾಣಿಗಳ ಮಾಂಸ ತಿನ್ನುತ್ತಾರೆ. ಭಿಕ್ಷಾಟನೆ ಮಾಡುತ್ತಾ ಬುರ‍್ರಕಥಾ ನಾಟಕಗಳನ್ನು ಪ್ರದರ್ಶಿಸುತ್ತಾ ಜೀವನ ಸಾಗಿಸುವ ಈ ಸಮುದಾಯದ ಬಹುತೇಕರು ಅನಕ್ಷರಸ್ತರಾಗಿದ್ದಾರೆ. ಅವರ ಜನಸಂಖ್ಯೆ 2001ರ ಜನಗಣತಿ ಪ್ರಕಾರ ರಾಜ್ಯದಲ್ಲಿ 54,873 ಇತ್ತು. ಆದರೆ, ವೀರಶೈವ ಲಿಂಗಾಯತ ಸಮುದಾಯದವರು ಈ ಸಮುದಾಯದ ಹೆಸರಲ್ಲಿ ಜಾತಿ ಪ್ರಮಾಣಪತ್ರ ಪಡೆಯಲು ಆರಂಭಿಸಿದ ಮೇಲೆ ಜನಸಂಖ್ಯೆ ವಿಪರೀತ ಏರಿಕೆಯಾಗಿದೆ. 2011ರ ಜನಗಣತಿಯ ವೇಳೆಗೆ 1.17 ಲಕ್ಷ, 2014ರಲ್ಲಿ ಕಾಂತರಾಜ ಆಯೋಗದ ವರದಿಯಲ್ಲಿ 4.10 ಲಕ್ಷ ಜನಸಂಖ್ಯೆ ಇದೆ ಎಂದು ವಿವರಿಸಿದ್ದಾರೆ.

ಬೇಡ ಜಂಗಮ, ಬುಡುಗ ಜಂಗಮ ಹೆಸರಿನಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ತಡೆಗಟ್ಟಲು ಸರ್ಕಾರವು ಕ್ರಮ ಕೈಗೊಳ್ಳಬೇಕು. ಸುಳ್ಳು ಜಾತಿ ಪ್ರಮಾಣಪತ್ರವನ್ನು ರದ್ದುಗೊಳಿಸಿ, ಅಂಥವರಿಗೆ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.