ADVERTISEMENT

ಹೈಕೋರ್ಟ್ ವಿಚಾರಣೆ ವೇಳೆ ನಾಡಗೀತೆಯ ಅನುರಣನ

​ಪ್ರಜಾವಾಣಿ ವಾರ್ತೆ
Published 13 ಜುಲೈ 2023, 16:20 IST
Last Updated 13 ಜುಲೈ 2023, 16:20 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ನಾಡಗೀತೆಯ ರಾಗದ ತಕರಾರಿಗೆ ಸಂಬಂಧಿಸಿದ ಪ್ರಕರಣದಲ್ಲಿ ವಿಚಾರಣೆ ವೇಳೆ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅವರು ವಿಭಿನ್ನ ರಾಗದಲ್ಲಿ ಕುವೆಂಪು ವಿರಚಿತ ನಾಡಗೀತೆಯನ್ನು ಹಾಡುವ ಮೂಲಕ ನ್ಯಾಯಪೀಠಕ್ಕೆ ರಾಗದ ಮಹತ್ವ ತಿಳಿಸಿದರು.

ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ ಧಾಟಿಯಲ್ಲಿ 2 ನಿಮಿಷ 30 ಸೆಕೆಂಡ್‌ಗಳಲ್ಲಿ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ಸರ್ಕಾರವು 2022ರ ಸೆಪ್ಟೆಂಬರ್ 25ರಂದು ಹೊರಡಿಸಿದ ಆದೇಶವನ್ನು ಆಕ್ಷೇಪಿಸಿ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ನ್ಯಾಯಮೂರ್ತಿಗಳು ಕಿಕ್ಕೇರಿ ಕೃಷ್ಣಮೂರ್ತಿ ಅವರನ್ನು ರಾಗಗಳ ಭಿನ್ನತೆಯ ವಿವರಣೆ ಕೇಳಿದ್ದಲ್ಲದೇ, ಹಾಡುವಂತೆ ಸೂಚಿಸಿದರು.

ADVERTISEMENT

ಕೋರ್ಟ್ ಹಾಲ್‌ನಲ್ಲಿಯೇ ಕೃಷ್ಣಮೂರ್ತಿಯವರು ತಮ್ಮ ವಾದಕ್ಕೆ ಪೂರಕವಾಗಿ ನಾಡಗೀತೆಯನ್ನು, ‘ಉದಯ ರವಿಚಂದ್ರಿಕೆ, ಜಂಜೂಟಿ, ಹಿಂದೋಳ, ಕಲ್ಯಾಣಿ ಮತ್ತು ಮಾಯಾ ಮಾಳವ ಗೌಳ’ ರಾಗಗಳಲ್ಲಿ ಹಾಡಿದರು.

ಸಿ.ಅಶ್ವತ್ಥ್ ಅವರು ಸಂಯೋಜಿಸಿರುವ ರಾಗದಲ್ಲೇ ನಾಡಗೀತೆ ಹಾಡುವುದು ಸಮಂಜಸ ಎಂದು ಪ್ರತಿಪಾದಿಸಿದರು.

ಕೃಷ್ಣಮೂರ್ತಿಯವರ ಪ್ರತಿಪಾದನೆಯನ್ನು ಪರಿಗಣಿಸಿದ ನ್ಯಾಯಮೂರ್ತಿಗಳು, ‘ಪ್ರಕರಣದಲ್ಲಿ ಅಡಗಿರುವ ವಿಚಾರ ಗಂಭೀರವಾಗಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿ, ಸರ್ಕಾರಿ ವಕೀಲರು ಈ ಪ್ರಕರಣದ ವಿಚಾರಗಳನ್ನು ಆಳವಾಗಿ ಶೋಧಿಸಿ, ಸಮಗ್ರ ಮಾಹಿತಿ ಕಲೆ ಹಾಕಿ ನ್ಯಾಯಾಲಯಕ್ಕೆ ನೀಡಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಇದೇ 31ಕ್ಕೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.