ಬೆಂಗಳೂರು: ನೌಕದಳದ ಕ್ಯಾಪ್ಟನ್ ಆಗಿ ನಿವೃತ್ತರಾಗಿದ್ದ ತಂದೆ ಹಾಗೂ ದಂತ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದ ತಾಯಿಯನ್ನು ಪುತ್ರ ಕೊಲೆ ಮಾಡಿದ್ದು, ಆರೋಪಿಯನ್ನು ಎಚ್‌ಎಎಲ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ನವೀನ್ ಚಂದ್ರ ಭಟ್ (61) ಹಾಗೂ ಶ್ಯಾಮಲಾ ಭಟ್ (55) ಕೊಲೆಯಾದವರು. ಆರೋಪಿ ರೋಹನ್ ಚಂದ್ರ ಭಟ್ (33) ಬಂಧಿತ ಆರೋಪಿ.
ಎಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ವಿಜ್ಞಾನ ನಗರದ ಆದರ್ಶ ವಿಸ್ತಾ ಅಪಾರ್ಟ್‌ಮೆಂಟ್‌ನ ವಿಲ್ಲಾ ಸಂಖ್ಯೆ 112ರಲ್ಲಿ ನವೀನ್ ಚಂದ್ರ ಭಟ್ ಹಾಗೂ ಶ್ಯಾಮಲಾ ಭಟ್ ಅವರು ವಾಸವಾಗಿದ್ದರು. ಪೋಷಕರ ಜತೆಗೆ ಪುತ್ರ ರೋಹನ್ ಭಟ್ ನೆಲಸಿದ್ದರು. ತಂದೆ ಹಾಗೂ ತಾಯಿಯನ್ನು ರೋಹನ್ ಭಟ್ ಚಾಕುವಿನಿಂದ ಬುಧವಾರ ಬೆಳಿಗ್ಗೆ ಇರಿದು ಕೊಲೆ ಮಾಡಿದ್ದಾರೆ. ಆದರ್ಶ ವಿಸ್ತಾ ಅಪಾರ್ಟ್‌ಮೆಂಟ್ ನಿವಾಸಿಯೊಬ್ಬರು ನೀಡಿದ ದೂರಿನ ಮೇರೆಗೆ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
‘ಸಾಫ್ಟ್‌ವೇರ್ ಎಂಜಿನಿಯರ್ ಕೆಲಸ ಮಾಡುತ್ತಿದ್ದ ರೋಹನ್ ಭಟ್ ಅವರು ಇತ್ತೀಚೆಗೆ ಕೆಲಸ ಬಿಟ್ಟಿದ್ದರು. ಬೇರೊಂದು ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದರು. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಕೌಟುಂಬಿಕ ಕಾರಣಕ್ಕೆ ಕೃತ್ಯ ಎಸಗಿರುವುದಾಗಿ ಆರೋಪಿ ಹೇಳುತ್ತಿದ್ದಾರೆ. ನಿಖರ ಕಾರಣ ಗೊತ್ತಾಗಿಲ್ಲ. ಆರೋಪಿಯನ್ನು ಗುರುವಾರ ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದುಕೊಳ್ಳಲಾಗುವುದು’ ಎಂದು ಪೊಲೀಸರು ಹೇಳಿದರು.
‘ಬುಧವಾರ ಬೆಳಿಗ್ಗೆ ಆರೋಪಿ ಚಾಕು ಹಿಡಿದು ವಿಲ್ಲಾದ ಒಳಗೆ ಹೋಗಿದ್ದನ್ನು ನಿವಾಸಿಗಳು ಗಮನಿಸಿದ್ದರು. ನವೀನ್ ಚಂದ್ರ ಭಟ್ ಹಾಗೂ ಶ್ಯಾಮಲಾ ಭಟ್ ಅವರು ಮಧ್ಯಾಹ್ನ ಕಳೆದರೂ ವಿಲ್ಲಾದಿಂದ ಹೊರಗೆ ಬಂದಿರಲಿಲ್ಲ. ಎದುರಿಗೆ ಇರುವ ವಿಲ್ಲಾದ ನಿವಾಸಿಗಳು ಹೋಗಿ ನೋಡಿದಾಗ ಕೊಲೆ ಆಗಿರುವುದು ಗೊತ್ತಾಗಿದೆ‘ ಎಂದು ಪೊಲೀಸರು ಹೇಳಿದರು.
‘ಬೌರಿಂಗ್ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹಗಳನ್ನು ಇಡಲಾಗಿದೆ. ಪುತ್ರಿ ರಶ್ಮಿ ಅವರು ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಬಂದ ಬಳಿಕ ಮೃತದೇಹಗಳನ್ನು ಹಸ್ತಾಂತರಿಸಲಾಗುವುದು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.