ಬೆಂಗಳೂರು: ‘ಚಪ್ಪಾಳೆ ಹೊಡೀತಾ ರಸ್ತೆ ಬದಿ ನಿಂತು ಭಿಕ್ಷೆ ಬೇಡ್ತೀರ... ರಸ್ತೆ ಹಿಂದೆಯೇ ‘ಸೆಕ್ಸ್’ ಮಾಡ್ತೀರ.. ಸಿಗ್ನಲ್‌ನಲ್ಲಿ ಜನರಿಗೆ ತೊಂದರೆ ಕೊಡ್ತೀರ.. ಇಷ್ಟುದ್ದ, ಎತ್ತರ ಬೆಳೆದಿದ್ರೂ ಭಿಕ್ಷೆ ಬೇಡೋಕೆ ನಿಮಗೆ ನಾಚಿಕೆಯಾಗಲ್ವಾ.. ನಿಮ್ಮಿಂದ ನಮ್ಮ ಸಮಾಜದ ಗೌರವ ಹಾಳಾಗ್ತಿದೆ.. ಎಲ್ಲಿಂದ ಬರ್ತೀರೋ ಕರ್ಮ, ಕರ್ಮ...’
‘ಈ ಸಮಾಜ ನಮಗಾಗಿ ಏನೂ ಮಾಡಿಲ್ಲ. ಆದರೆ, ಸಮಾಜದಲ್ಲಿರುವ ಎಲ್ಲರೂ ನಮ್ಮನ್ನು ಹೀಗೆ ಪ್ರಶ್ನಿಸುತ್ತಾರೆ, ಮೂದಲಿಸುತ್ತಲೇ ಇರುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು ನಟಿ, ಬರಹಗಾರ್ತಿ ರೇವತಿ.
ಇನ್ನರ್‌ಕ್ಲಬ್ ಮತ್ತು ‘ಜೀವ’ ಹಾಗೂ ‘ಸಂಹಿತ’ ತಂಡ ಗುರುವಾರ ವರ್ಚುವಲ್ ರೂಪದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಬದುಕು ಬಯಲು’ ಬೀದಿನಾಟಕ ಪ್ರದರ್ಶಿಸಿದ ಅವರು, ತಮ್ಮ ಜೀವನದ ವೃತ್ತಾಂತವನ್ನು ಹೇಳುತ್ತಾ ಸಾಗಿದರು.
‘ನಾವು ಭಿಕ್ಷೆ ಬೇಡುವುದು ಇವರಿಗೆ ಅಗೌರವವಾಗಿ ಕಾಣುತ್ತದೆ. ಆದರೆ, ಎಂಟು–ಹತ್ತು ವರ್ಷದ ಹಸುಳೆಗಳ ಮೇಲೆ ಅತ್ಯಾಚಾರ ಎಸಗುವುದು ಗೌರವವೇ ? ಜಾತಿ–ಧರ್ಮದ ಹೆಸರಲ್ಲಿ ಗಲಭೆ ನಡೆಸಿ ಮುಗ್ಧರನ್ನು ಸಾಯಿಸುವುದು ಗೌರವವೇ ? ಸತ್ಯದ ಪರ ಮಾತನಾಡುವವರನ್ನು, ಬರೆಯುವವರನ್ನು ಗುಂಡಿಕ್ಕಿ ಹತ್ಯೆ ಮಾಡುವುದು ಗೌರವವೇ’ ಎಂದು ಅವರು ಪ್ರಶ್ನಿಸಿದರು.
‘ಇದೇ ಬೆಂಗಳೂರಿನ ಸೇಂಟ್‌ಮಾರ್ಕ್ಸ್ ರಸ್ತೆಯಲ್ಲಿ ನಾನು ಹೋಗುತ್ತಿದ್ದಾಗ ಪೊಲೀಸ್ ಒಬ್ಬ ನನ್ನನ್ನು ಠಾಣೆಗೆ ಕರೆದೊಯ್ದ. ಠಾಣೆ ಪೂರ್ತಿ ಸ್ವಚ್ಛಗೊಳಿಸಲು ಹೇಳಿದ. ಬೂಟುಗಾಲಿನಿಂದ ತುಳಿದ. ನೆಲದ ಮೇಲೆ ಅನ್ನ ಹಾಕಿ ತಿನ್ನು ಎಂದ. ಕಳ್ಳನೊಬ್ಬನ ಎದುರು ಬೆತ್ತಲೆಯಾಗಿ ಕುಣಿಯುವಂತೆ ಹೇಳಿದ. ಶಸ್ತ್ರಚಿಕಿತ್ಸೆ ಮಾಡಿಸಿದ್ದ ಜಾಗಕ್ಕೆ ಲಾಠಿ ಹಾಕಿ ಆನಂದಪಟ್ಟ. ಇದು ಗೌರವದ ವಿಷಯವೇ’ ಎಂದು ಅವರು ಕೇಳಿದರು.
‘ಎಲ್ಲರಂತೆ ನಾನೂ ಒಬ್ಬನನ್ನು ಮದುವೆಯಾದೆ. ಅವನನ್ನು ನಾನು ಪತಿಯಂತೆ ನೋಡಿದೆ. ಅವನು ನನ್ನನ್ನು ಪಾರ್ಟ್‌ನರ್ ರೀತಿ ಮಾತ್ರ ಕಂಡ. ಅಂದರೆ, ಅದು ಬಿಸಿನೆಸ್‌ನಲ್ಲಿ ಇರುವ ಪಾರ್ಟ್‌ನರ್‌ನಂತಷ್ಟೇ ಇತ್ತು’ ಎಂದು ಸ್ಮರಿಸಿಕೊಂಡರು.
‘ನನ್ನ ಜೀವನದ ಎಲ್ಲ ಘಟನೆಗಳು ಅಕ್ಷರ ರೂಪಕ್ಕೆ ಇಳಿದಿವೆ. ಅದು ತಮಿಳು, ಕನ್ನಡ, ಮಲಯಾಳ, ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳಲ್ಲಿ ಪ್ರಕಟಗೊಂಡಿದೆ. ಡಾ. ಬಿ.ಆರ್. ಅಂಬೇಡ್ಕರ್ ವ್ಯಾಸಂಗ ಮಾಡಿದ್ದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಆ ಕೃತಿಗಳನ್ನು ಇಡಲಾಗಿದೆ. ನನ್ನ ಬಗ್ಗೆ ಹೊಗಳಿಕೊಳ್ಳಬೇಕು ಎಂದು ನಾನು ಇದನ್ನೆಲ್ಲ ಹೇಳುತ್ತಿಲ್ಲ. ನಾನು ಸಾಗಿಬಂದ ದಾರಿ ಇತರರಿಗೂ ಪ್ರೇರಣೆಯಾಗಲಿ ಎಂಬ ಉದ್ದೇಶವಷ್ಟೇ’ ಎಂದು ಹೇಳಿದರು.
‘ನಮ್ಮನ್ನು ಅಪ್ಪ–ಅಮ್ಮ ಒಪ್ಪಲ್ಲ. ಊರು–ಕೇರಿ, ದೇಶವೂ ಒಪ್ಪುವುದಿಲ್ಲ. ಇಂದಿಗೂ ಲೈಂಗಿಕ ಅಲ್ಪಸಂಖ್ಯಾತರಿಗೆ ಕೆಲಸ ಸಿಗುತ್ತಿಲ್ಲ. ಆಸ್ತಿಯನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆ ಸಮಾಜದ ದೃಷ್ಟಿಕೋನ ಬದಲಾಗಬೇಕು. ನಮಗೆ ಜನರ ಕರುಣೆ ಬೇಡ. ಸಂವಿಧಾನಬದ್ಧ ಹಕ್ಕುಗಳು ಸಿಗಬೇಕು’ ಎಂದು ಅವರು ಒತ್ತಾಯಿಸಿದರು.
ಇನ್ನರ್‌ವೀಲ್ ಕ್ಲಬ್‌ನ ಅಧ್ಯಕ್ಷೆ ಪ್ರೇಮಾ ಅಯ್ಯರ್, ಕವಿತಾ ಪಿಶಯ್ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.