ಬೆಂಗಳೂರು: ‘ಶಿಕ್ಷಣದ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ವಿಯಾಗುವುದರ ಮೂಲಕ ದೇಶಕ್ಕೆ ಏನಾದರೂ ಕೊಡುಗೆ ನೀಡುವಂತಾಗಲಿ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಹೇಳಿದರು.
ನಗರದಲ್ಲಿ ಸೋಮವಾರ ರೇವಾ ವಿಶ್ವವಿದ್ಯಾಲಯ ಆಯೋಜಿಸಿದ್ದ 8ನೇ ಘಟಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಶಿಕ್ಷಣವೆಂಬುದು ವಿದ್ಯಾರ್ಥಿಗಳು ಉದ್ಯೋಗ ಪಡೆದುಕೊಳ್ಳಲು ಮತ್ತು ಉತ್ತಮ ಜೀವನ ರೂಪಿಸಿಕೊಳ್ಳಲು ಇರುವ ಒಂದು ಸಾಧನವಾಗಿದೆ. ರೇವಾ ವಿಶ್ವವಿದ್ಯಾಲಯದಲ್ಲಿ ಗುಣಮಟ್ಟದ ಶಿಕ್ಷಣ, ಉನ್ನತ ತಾಂತ್ರಿಕ ಸಲಕರಣೆಗಳು, ಅತ್ಯಾಧುನಿಕ ಪ್ರಯೋಗಾಲಯವಿದೆ. ಇಲ್ಲಿ ಶಿಕ್ಷಣಕ್ಕೆ ಪೂರಕವಾದ ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳಿವೆ. ಜೊತೆಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸಂಪೂರ್ಣ ಲಾಭ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದ ರಾಜ್ಯಪಾಲ ಥಾವರಚಂದ್ ಗೆಹಲೋತ್, ‘ವಿದ್ಯಾರ್ಥಿಗಳು ತಾವು ಪಡೆದ ಶಿಕ್ಷಣದಿಂದ ಉತ್ತಮ ಉದ್ಯೋಗ ಪಡೆದುಕೊಂಡು ದೇಶದ ಪ್ರಗತಿಗೆ ಕೊಡುಗೆ ನೀಡಬೇಕು. ರೇವಾ ವಿಶ್ವವಿದ್ಯಾಲಯವು ಪರಿಸರ ಜಾಗೃತಿ, ಮತದಾನ ಜಾಗೃತಿ ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕೃತಿಯನ್ನು ಬೆಳೆಸುತ್ತಿದೆ’ ಎಂದು ಹೇಳಿದರು.
ವಿಶ್ವವಿದ್ಯಾಲಯದ ಕುಲಾಧಿಪತಿ ಪಿ. ಶ್ಯಾಮರಾಜು, ‘ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವದಲ್ಲಿ 3,050 ವಿದ್ಯಾರ್ಥಿಗಳಿಗೆ ಪದವಿ, 1,183 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ, 56 ವಿದ್ಯಾರ್ಥಿಗಳಿಗೆ ಪಿ.ಎಚ್‌ಡಿ ಪದವಿ ಸೇರಿದಂತೆ ಒಟ್ಟು 4,289 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 47 ವಿದ್ಯಾರ್ಥಿಗಳಿಗೆ ರೇವಾ ಅಕಾಡೆಮಿ ಫಾರ್ ಕಾರ್ಪೊರೇಟ್ ಎಕ್ಸ್‌ಲೆನ್ಸ್‌ನಿಂದ ಬಂದವರು ಇದ್ದಾರೆ. ವಿವಿಧ ವಿಭಾಗಗಳಲ್ಲಿ ಉತ್ತಮ ರ್‍ಯಾಂಕ್ ಪಡೆದ 59 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು’ ಎಂದು ಮಾಹಿತಿ ನೀಡಿದರು.
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷ ಟಿ.ಜಿ.ಸೀತಾರಾಂ, ವಿಶ್ವವಿದ್ಯಾಲಯದ ಕುಲಪತಿ ಎಂ. ಧನಂಜಯ, ಕುಲಸಚಿವ ಎನ್.ರಮೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.