ADVERTISEMENT

ರಸ್ತೆಯಲ್ಲಿ ಮಳೆ ನೀರು: 15 ದಿನದಲ್ಲಿ ಬಿಬಿಎಂಪಿ ಕ್ರಮ

ಪಶ್ಚಿಮ ವಲಯ ವ್ಯಾಪ್ತಿ ಅಧಿಕಾರಿಗಳಿಗೆ ಮುಖ್ಯ ಆಯುಕ್ತರ ಸೂಚನೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 21:01 IST
Last Updated 1 ಜುಲೈ 2022, 21:01 IST
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಪಶ್ಚಿಮ ವಲಯದಲ್ಲಿ ರಸ್ತೆ ಚರಂಡಿಗಳನ್ನು ಪರಿಶೀಲಿಸಿದರು
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಪಶ್ಚಿಮ ವಲಯದಲ್ಲಿ ರಸ್ತೆ ಚರಂಡಿಗಳನ್ನು ಪರಿಶೀಲಿಸಿದರು   

ಬೆಂಗಳೂರು: ಮಳೆ ನೀರು ರಸ್ತೆಯಲ್ಲಿ ನಿಲ್ಲದಂತೆ ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ 10–15 ದಿನಗಳಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚಿಸಿದರು.

ನಗರದ ಪಶ್ಚಿಮ ವಲಯ ವ್ಯಾಪ್ತಿ ಯಲ್ಲಿ ವಿವಿಧ ಸ್ಥಳಗಳಲ್ಲಿ ಶುಕ್ರವಾರ ತಪಾಸಣೆ ನಡೆಸಿದ ಅವರು, ಈ ವಲಯದಲ್ಲಿ ಸುಮಾರು 12 ಸ್ಥಳಗಳಲ್ಲಿ ನೀರು ನಿಂತು ಸಮಸ್ಯೆ ಉಂಟಾಗುತ್ತಿದೆ. ಇದನ್ನು ಕೂಡಲೇ ಪರಿಹರಿಸುವಂತೆ ಆದೇಶಿಸಿದರು.

ಸದಾಶಿವನಗರ ಪೊಲೀಸ್ ಠಾಣೆ ಯಿಂದ ನ್ಯೂ ಬಿಇಎಲ್ ರಸ್ತೆ, ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ರಸ್ತೆ ಶೋಲ್ಡರ್ ಡ್ರೈನ್ ಅನ್ನು ಸ್ವಚ್ಛಗೊಳಿಸಬೇಕು. ಟ್ರಾನ್ಸ್‌ಫಾರ್ಮರ್‌ನ ವಿದ್ಯುತ್‌ ತಂತಿಗಳು ಪಾದಚಾರಿ ಮಾರ್ಗದಲ್ಲಿರುವುದರಿಂದ ಸಮಸ್ಯೆಯಾಗುತ್ತಿದ್ದು, ಅದನ್ನು ಸರಿಪಡಿಸಲು ಬೆಸ್ಕಾಂ ಅಧಿಕಾರಿಗಳಿಗೆಹೇಳಿದರು.

ADVERTISEMENT

ರಸ್ತೆ ಬದಿಯಿರುವ ಚರಂಡಿಗೆ ನೇರವಾಗಿ ಒಳಚರಂಡಿ ನೀರು ಹರಿಯುವುದನ್ನು ಗಮನಿಸಿದ ಮುಖ್ಯ ಆಯುಕ್ತರು, ಜಲಮಂಡಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ನೋಟಿಸ್‌ ನೀಡಲು ಸೂಚಿಸಿದರು.

ತುಮಕೂರು ಕಡೆ ಹೋಗುವ ಹೊರ ವರ್ತುಲ ರಸ್ತೆಯ ಎಂ.ಇ.ಐ ಜಂಕ್ಷನ್ ಬಳಿ, ಮಹಾಲಕ್ಷ್ಮೀಪುರ ವಾರ್ಡ್ ಜೆ.ಎಸ್.ನಗರ 60 ಅಡಿ ರಸ್ತೆಯಲ್ಲಿ ಚರಂಡಿ, ಶೋಲ್ಡರ್‌ ಡ್ರೈನ್‌ಗಳನ್ನು ಸ್ವಚ್ಛಗೊಳಿಸಲು ತಿಳಿಸಿದರು. ಜೆ.ಸಿ. ನಗರದ ಬಳಿಯಿರುವ ವೃಷಭಾವತಿ ಕಾಲುವೆ ತಡೆಗೋಡೆ ಕಾಮಗಾರಿಯನ್ನು ತ್ವರಿತವಾಗಿ ಪ್ರಾರಂಭಿಸಲು ರಾಜಕಾಲುವೆ ವಿಭಾಗದವರಿಗೆ ಹೇಳಿದರು.

ಮೇಲುಸೇತುವೆ: ಮಾಗಡಿ ಮುಖ್ಯರಸ್ತೆ ಮೂಲಕ ಹೆಚ್ಚು ವಾಹನಗಳು ಸಂಚರಿಸುವ ನಿಟ್ಟಿನಲ್ಲಿ ವೀರೇಶ್ ಚಿತ್ರ ಮಂದಿರದ ಬಳಿ ಪಾದಚಾರಿಗಳು ರಸ್ತೆ ದಾಟಲು ಮೇಲು ಸೇತುವೆ ನಿರ್ಮಿಸಲು ಅಧಿಕಾರಿಗಳಿಗೆ ಆದೇಶಿಸಿದರು.

ಓಕಳಿಪುರ ಅಷ್ಟಪಥ ಕಾರಿಡಾರ್ ಬಳಿ ರೈಲ್ವೆ ಇಲಾಖೆ ವತಿಯಿಂದ ನಡೆಯುತ್ತಿರುವ ಬಾಕ್ಸ್ ಅಳವಡಿಸುವ ಕಾಮಗಾರಿಯನ್ನು ಇನ್ನೊಂದು ತಿಂಗಳಲ್ಲಿ ಪೂರ್ಣಗೊಳಿಸಲು ತುಷಾರ್‌ ಗಿರಿನಾಥ್‌ ಸೂಚಿಸಿದರು.

ವಲಯ ಆಯುಕ್ತ ಡಾ. ದೀಪಕ್, ವಲಯ ಜಂಟಿ ಆಯುಕ್ತ ಶ್ರೀನಿವಾಸ್, ಮುಖ್ಯ ಎಂಜಿನಿಯರ್‌ ದೊಡ್ಡಯ್ಯ, ಲೋಕೇಶ್, ಜಲಮಂಡಳಿ, ಬೆಸ್ಕಾಂ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.