ADVERTISEMENT

ಬೆಂಗಳೂರು | ‘ಅಕ್ಕಿ ಕಳ್ಳ’ ಆರೋಪ: ಎಫ್ಐಆರ್ ರದ್ದು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 16:19 IST
Last Updated 13 ಸೆಪ್ಟೆಂಬರ್ 2025, 16:19 IST
   

ಬೆಂಗಳೂರು: ‘ರಾಜಕೀಯ ವಿರೋಧಿಗಳು ಪರಸ್ಪರ ಕಳ್ಳ ಎಂದು ಜರಿದುಕೊಂಡರೆ ಅದನ್ನೇ ಆಧಾರವಾಗಿಸಿಕೊಂಡು ಕ್ರಿಮಿನಲ್‌ ಪ್ರಕರಣ ದಾಖಲಿಸಲು ಆಗದು’ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

‘ನನ್ನ ವಿರುದ್ಧ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಮತ್ತು ಅದಕ್ಕೆ ಸಂಬಂಧಿಸಿದ ನ್ಯಾಯಿಕ ಪ್ರಕ್ರಿಯೆ ರದ್ದುಪಡಿಸಬೇಕು’ ಎಂದು ಕೋರಿ ಗುರುಮಠಕಲ್‌ನ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್‌ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ‌.ಜಿ.ಉಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ (ಕಲಬುರಗಿ) ಪುರಸ್ಕರಿಸಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರನ್ನು ‘ಅಕ್ಕಿ ಕಳ್ಳ’ ಎಂದು ಸಂಬೋಧಿಸಿದ ಆರೋಪದಡಿ ಮಣಿಕಂಠ ರಾಠೋಡ್‌ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಿದೆ.

ADVERTISEMENT

‘ಅರ್ಜಿದಾರರ ವಿರುದ್ಧ ಎಫ್‌ಐಆರ್‌ ದಾಖಲಿಸಿರುವುದು ಮೇಲ್ನೋಟಕ್ಕೆ ರಾಜಕೀಯ ಪ್ರೇರಿತವಾಗಿದೆ. ದೂರುದಾರರು ತಮ್ಮ ಅನುಕೂಲಕ್ಕಾಗಿ ನ್ಯಾಯಾಂಗ ಪ್ರಕ್ರಿಯೆಯನ್ನು ಅಸ್ತ್ರವನ್ನಾಗಿ ಬಳಕೆ ಮಾಡಿಕೊಂಡಿದ್ದಾರೆ. ಹೀಗಾಗಿ, ರಾಠೋಡ್ ವಿರುದ್ಧ ನ್ಯಾಯಾಂಗ ಪ್ರಕ್ರಿಯೆ ಆರಂಭಿಸಿರುವುದು ಕಾನೂನಿನ ದುರ್ಬಳಕೆಯಲ್ಲದೇ ಬೇರೇನೂ ಅಲ್ಲ. ಹೀಗಾಗಿ, ಪ್ರಕರಣ ರದ್ದುಗೊಳಿಸಲಾಗಿದೆ’ ಎಂದು ನ್ಯಾಯಪೀಠ ಹೇಳಿದೆ.

ಮಣಿಕಂಠ ರಾಠೋಡ್‌ ಪರ ಪದಾಂಕಿತ ಹಿರಿಯ ವಕೀಲ ಎಂ.ಅರುಣ್‌ ಶ್ಯಾಮ್‌ ವಾದ ಮಂಡಿಸಿದ್ದರು. ಹೈಕೋರ್ಟ್ ವಕೀಲ ಜಿ.ಆರ್‌.ಬಸವಕಿರಣ್‌ ವಕಾಲತ್ತು ವಹಿಸಿದ್ದರು.

ಪ್ರಕರಣವೇನು?:

‘ಮಣಿಕಂಠ ರಾಠೋಡ್‌ ಅವರು 2025ರ ಮೇ 26ರಂದು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ವಿಡಿಯೊ ಅಪ್‌ಲೋಡ್‌ ಮಾಡಿ, ಅದರಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಅವರನ್ನು ‘ಲೇ ಅಕ್ಕಿ ಕಳ್ಳ’ ಎಂದು ಏಕವಚನದಲ್ಲಿ ನಿಂದಿಸಿದ್ದಾರೆ. ಅಂತೆಯೇ, ಕೋಲಿ ಕಬ್ಬಲಿಗ ಎಸ್‌.ಟಿ‌. ರಾಜ್ಯ ಘಟಕದ ಅಧ್ಯಕ್ಷ ಲಚ್ಚಪ್ಪ ಜಮಾದಾರ ಅವರನ್ನು ‘ಟೋಪಿ ಲಚ್ಚ್ಯಾ’ ಎಂದು ಕರೆದು ಅವಮಾನಿಸಿದ್ದಾರೆ. ಆದ್ದರಿಂದ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಕಾಂಗ್ರೆಸ್‌ ಕಾರ್ಯಕರ್ತ ಹಣಮಂತ ದೂರು ನೀಡಿದ್ದರು.

ಇದನ್ನು ಆಧರಿಸಿ ಚಿತ್ತಾಪುರ ಪೊಲೀಸರು ಮಣಿಕಂಠ ರಾಠೋಡ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ-2023ರ ಕಲಂ 352 ಮತ್ತು 353(2)ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.