
ರಿಕ್ಕಿ ಕೇಜ್
ಚಿತ್ರ: ಎಕ್ಸ್ ಖಾತೆ
ಬೆಂಗಳೂರು: ಗ್ರ್ಯಾಮಿ ಪ್ರಶಸ್ತಿ ವಿಜೇತ ಖ್ಯಾತ ಸಂಗೀತಗಾರ ರಿಕ್ಕಿ ಕೇಜ್ ಅವರ ಬೆಂಗಳೂರಿನ ನಿವಾಸದಲ್ಲಿ ಕಳ್ಳತನವಾಗಿದೆ. ಡೆಲಿವರಿ ಬಾಯ್‌ಗಳ ವೇಷದಲ್ಲಿ ಬಂದ ಇಬ್ಬರು ಖದೀಮರು, ಮನೆಯ ನೀರಿನ ಸಂಪ್‌ನ ಕಬ್ಬಿಣದ ಮುಚ್ಚಳವನ್ನು ಕದ್ದೊಯ್ದಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪದ್ಮಶ್ರೀ ಪುರಸ್ಕೃತ, ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತರಾಗಿರುವ ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಅವರ ನಿವಾಸದಲ್ಲಿ ಈ ಕಳ್ಳತನ ನಡೆದಿದೆ. ಈ ಬಗ್ಗೆ ಖುದ್ದು ರಿಕ್ಕಿ ಕೇಜ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಕಳ್ಳತನದ ಸಿಸಿಟಿವಿ ದೃಶ್ಯವನ್ನು ಹಂಚಿಕೊಂಡಿದ್ದಾರೆ. ವಿಡಿಯೊ ಜೊತೆಗೆ ಘಟನೆ ಬಗ್ಗೆ ಸುವಿವರವಾಗಿ ಬರೆದಿಕೊಂಡಿದ್ದಾರೆ.
ಡಿಸೆಂಬರ್ 11 ಗುರುವಾರದಂದು ಸಂಜೆ ಸುಮಾರು 6ಗಂಟೆ ವೇಳೆಗೆ ಈ ಘಟನೆ ನಡೆದಿದ್ದು, ಇಬ್ಬರು ಯುವಕರು ದ್ವಿಚಕ್ರ ವಾಹನದಲ್ಲಿ ಬಂದು ಮನೆಯ ಆವರಣದಲ್ಲಿ ಇರುವ ನೀರಿನ ಸಂಪ್‌ನ ಕಬ್ಬಿಣದ ಮುಚ್ಚಳವನ್ನು ಕದ್ದು ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
‘ಇಬ್ಬರು ಸ್ವಿಗ್ಗಿ ಅಥವಾ ಜೊಮ್ಯಾಟೋ ಡೆಲಿವರಿ ಸಿಬ್ಬಂದಿಯಂತೆ ದ್ವಿಚಕ್ರ ವಾಹನದಲ್ಲಿ ಬಂದ ಯುವಕರಲ್ಲಿ ಒಬ್ಬ ಆವರಣಕ್ಕೆ ನುಗ್ಗಿ ನೀರಿನ ಸಂಪ್‌ನ ಕಬ್ಬಿಣದ ಗಾರ್ಡ್ ತೆಗೆಯಲು ಯತ್ನಿಸುತ್ತಿದ್ದ. ಮತ್ತೊಬ್ಬ ಯುವಕ ರಸ್ತೆಯಲ್ಲಿಯೇ ಬೈಕ್ ಮೇಲೆ ಕುಳಿತುಕೊಂಡಿದ್ದ. ಆವರಣದಲ್ಲಿದ್ದ ಯುವಕ ಕಬ್ಬಿಣದ ಗಾರ್ಡ್ ತೆಗೆದುಕೊಂಡು ಬೈಕ್ ಹತ್ತಿ ಪರಾರಿಯಾಗಿದ್ದಾರೆ. ಅದರಲ್ಲಿ ಇಬ್ಬರು KA03 HY 8751 ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ ಬಂದಿದ್ದರು’ ಎಂದು ರಿಕ್ಕಿ ಕೇಜ್ ಬರೆದುಕೊಂಡಿದ್ದಾರೆ.
ಇನ್ನು, ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ತನಿಖೆ ಆರಂಭಿಸಿದ್ದಾರೆ. ಅಲ್ಲದೇ ಜೊಮ್ಯಾಟೋ ಕೂಡ ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಕಳವಳ ವ್ಯಕ್ತಪಡಿಸಿದೆ. ‘ಹಾಯ್ ರಿಕಿ, ಇದು ನಿಜಕ್ಕೂ ಕಳವಳಕಾರಿ. ನಮ್ಮ ವಿತರಣಾ ಪಾಲುದಾರರಿಂದ ಅಂತಹ ನಡವಳಿಕೆಯನ್ನು ನಾವು ಖಂಡಿತವಾಗಿಯೂ ಪ್ರೋತ್ಸಾಹಿಸುವುದಿಲ್ಲ. ಅಗತ್ಯ ಕ್ರಮ ಕೈಗೊಳ್ಳಲು ಸಾಧ್ಯವಾಗುವಂತೆ ನಾವು ಇದನ್ನು ತಕ್ಷಣವೇ ತನಿಖೆ ಮಾಡುತ್ತೇವೆ. ಮತ್ತು ದಯವಿಟ್ಟು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಲು ನಾವು ವಿನಂತಿಸುತ್ತೇವೆ ಇದರಿಂದ ನಾವು ಸಂಪರ್ಕಿಸಬಹುದು’ ಎಂದು ಬರೆದುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.