ADVERTISEMENT

ನೈಜ ಸಂಘಗಳಿಂದ ಅರ್ಹರಿಗೆ ಪ್ರಶಸ್ತಿ: ಸಂಗೀತ ವಿದ್ವಾಂಸ ಆರ್.ಕೆ.ಪದ್ಮನಾಭ

ಉತ್ತರ ಕನ್ನಡದ ತಿಮ್ಮಣ್ಣ ಭಟ್ಟರಿಗೆ ಬೆಳಗೆರೆ ಮಹಾಲಕ್ಷ್ಮಮ್ಮ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 16:19 IST
Last Updated 22 ಫೆಬ್ರುವರಿ 2026, 16:19 IST
<div class="paragraphs"><p>ಬೆಂಗಳೂರಿನಲ್ಲಿ ಭಾನುವಾರ 'ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನ' ಆಯೋಜಿಸಿದ್ದ 26ನೇ ವಾರ್ಷಿಕೋತ್ಸವ ಸಂಭ್ರಮ, ಪುರಂದರದಾಸರು, ಕನಕದಾಸರು, ತ್ಯಾಗರಾಜರ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ತಿಮ್ಮಣ್ಣ ರಾಮಕೃಷ್ಣ ಭಟ್ಟ ಬಾಲೀಗದ್ದೆ ಅವರಿಗೆ ‘ಬೆಳಗೆರೆ ಮಹಾಲಕ್ಷ್ಮಮ್ಮ ಸ್ಮರಣಾರ್ಥ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.&nbsp;</p></div>

ಬೆಂಗಳೂರಿನಲ್ಲಿ ಭಾನುವಾರ 'ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನ' ಆಯೋಜಿಸಿದ್ದ 26ನೇ ವಾರ್ಷಿಕೋತ್ಸವ ಸಂಭ್ರಮ, ಪುರಂದರದಾಸರು, ಕನಕದಾಸರು, ತ್ಯಾಗರಾಜರ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ತಿಮ್ಮಣ್ಣ ರಾಮಕೃಷ್ಣ ಭಟ್ಟ ಬಾಲೀಗದ್ದೆ ಅವರಿಗೆ ‘ಬೆಳಗೆರೆ ಮಹಾಲಕ್ಷ್ಮಮ್ಮ ಸ್ಮರಣಾರ್ಥ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. 

   

ಬೆಂಗಳೂರು: ‘ಕರ್ನಾಟಕ ರಾಜ್ಯೋತ್ಸವ ಮಾತ್ರವಲ್ಲ, ಪದ್ಮಶ್ರೀ ಪ್ರಶಸ್ತಿಯೂ ದುಡ್ಡು ಕೊಟ್ಟರೆ ಸಿಗಲಿದೆ. ಆದರೆ, ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಸಂಘ ಸಂಸ್ಥೆಗಳು ಪ್ರಶಸ್ತಿಗಳನ್ನು ಅರ್ಹರಿಗೆ ನೀಡಿ ಮೌಲ್ಯ ಹೆಚ್ಚಿಸಿವೆ’ ಎಂದು ಸಂಗೀತ ವಿದ್ವಾಂಸ ಆರ್.ಕೆ.ಪದ್ಮನಾಭ ಹೇಳಿದರು.

ಶ್ರೀರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನವು ಬನಶಂಕರಿ ದೇವಗಿರಿ ವೆಂಕಟೇಶ್ವರ ದೇವಸ್ಥಾನದಲ್ಲಿ ಭಾನುವಾರ ಆಯೋಜಿಸಿದ್ದ 26ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿ ಉತ್ತರ ಕನ್ನಡದ ವಿದ್ವಾಂಸ ತಿಮ್ಮಣ್ಣ ರಾಮಕೃಷ್ಣ ಭಟ್ಟ ಬಾಲೀಗದ್ದೆ ಅವರಿಗೆ ಬಿ.ಎಸ್‌.ಬೆಳಗೆರೆ ಮಹಾಲಕ್ಷ್ಮಮ್ಮ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ADVERTISEMENT

‘ಈಗಿನ ಕಾಲದಲ್ಲಿ ಪ್ರಶಸ್ತಿಗೆ ಅರ್ಹರು ಯಾರು ಎಂದು ಹುಡುಕುವ ಸ್ಥಿತಿಯಿದೆ. ರಾಷ್ಟ್ರಪತಿ ಅವರ ಕಚೇರಿಯಿಂದಲೂ ಸಾಧಕರನ್ನು ಆಹ್ವಾನಿಸಿ ಗೌರವಿಸಲಾಗುತ್ತದೆ. ಅದು ಸರ್ಕಾರದ ಕಾರ್ಯಕ್ರಮವಾಗಿರುತ್ತದೆಯೇ ವಿನಃ ಪ್ರೀತಿ ಇರುವುದಿಲ್ಲ. ಆದರೆ ಇಂತಹ ಸಂಸ್ಥೆಗಳು ನಿಷ್ಕಾಮವಾಗಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪ್ರಶಸ್ತಿ ನೀಡುತ್ತವೆ’ ಎಂದು ಹೇಳಿದರು.

‘ತಂದೆ, ತಾಯಿ ಜಮೀನು, ಮನೆ ಮಾರಾಟ ಮಾಡಿ ಮಕ್ಕಳಿಗೆ ಶಿಕ್ಷಣ ನೀಡುತ್ತಾರೆ. ಆದರೆ ಹಾಗೆ ಎಲ್ಲವನ್ನೂ ಧಾರೆ ಎರೆದು ಮಕ್ಕಳನ್ನು ಸಂಸ್ಕಾರಯುತರನ್ನಾಗಿಸಿದರೆ ಕೆಲವರು ತಂದೆ ತಾಯಿಯನ್ನು ವೃದ್ದಾಶ್ರಮಕ್ಕೆ ಸೇರಿಸಿ ಬಿಡುತ್ತಾರೆ. ತಂದೆ ತಾಯಿಗೆ ಎಷ್ಟು ಸೇವೆ ಮಾಡಿದರೂ ಕಡಿಮೆಯೇ. ಗೌರಿ ನಾಗರಾಜ್‌ ಅವರು ತಮ್ಮ ತಾಯಿ, ಸಾಹಿತಿ ಮಹಾಲಕ್ಷ್ಮಮ್ಮ ಅವರ ಹೆಸರಿನಲ್ಲಿ ನಿರಂತರವಾಗಿ ಕಾರ್ಯಕ್ರಮ ನಡೆಸುತ್ತಾ ಪ್ರತಿಭಾವಂತರಿಗೆ ಪ್ರಶಸ್ತಿ ನೀಡುತ್ತಿರುವುದು ಸ್ತುತ್ಯರ್ಹ’ ಎಂದರು.

ತಾಯಿ ಋಣ ದೊಡ್ಡದು: ಪ್ರಶಸ್ತಿ ಸ್ವೀಕರಿಸಿದ ತಿಮ್ಮಣ್ಣ ರಾಮಕೃಷ್ಣ ಭಟ್ಟ ಮಾತನಾಡಿ, ‘ತಾಯಿ, ತಂದೆ ಅವರನ್ನು ಸ್ಮರಿಸಿ ಅವರಿಗೆ ಗೌರವ ಸಲ್ಲಿಸುವುದು ದೊಡ್ಡ ಕೆಲಸ. ತಂದೆಗಿಂತ ತಾಯಿಯ ಋಣ ಮೂರು ಪಟ್ಟು ದೊಡ್ಡದು. ಜನ್ಮ ನೀಡಿ, ನಂತರ ಗುರುವಾಗಿ ಬದುಕು ರೂಪಿಸಲು ತಾಯಿ ಪಾತ್ರವೇ ಹಿರಿದಾದದು. ನನ್ನನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದ್ದು ಸಂತಸ ನೀಡಿದೆ’ ಎಂದರು.

ಅರ್ಹ ವಿದ್ವಾಂಸಗೆ ಗೌರವ: ಉಜಿರೆ ಎಸ್‌ಡಿಎಂನ ಕುಲಸಚಿವ ಶ್ರೀಧರ ಎನ್‌. ಭಟ್ಟ ಮಾತನಾಡಿ, ‘ತಿಮ್ಮಣ್ಣ ಭಟ್ಟ ಅವರು ಶಾಸ್ತ್ರ ಪಾರಂಗತರು. 91ನೇ ವಯಸ್ಸಿನಲ್ಲಿಯೂ ನಿರಂತರ ಅಧ್ಯಯನದ ಮೂಲಕ ಶಾಸ್ತ್ರಗಳ ಕುರಿತು ನಿಖರವಾಗಿ ಮಾಹಿತಿ ನೀಡಿ ಮಾರ್ಗದರ್ಶನ ನೀಡುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಗೆ ಸೀಮಿತವಾಗಿದ್ದ ಇಂತಹ ಸಾಧಕರನ್ನು ಗುರುತಿಸಿದ್ದು ಶ್ಲಾಘನೀಯ’ ಎಂದು ಹೇಳಿದರು.

ದೇವಗಿರಿ ವೆಂಕಟೇಶ್ವರ ಟ್ರಸ್ಟ್ ಅಧ್ಯಕ್ಷ ನರಸಿಂಹಮೂರ್ತಿ, ಪ್ರತಿಷ್ಠಾನದ ಅಧ್ಯಕ್ಷೆ ಗೌರಿ ನಾಗರಾಜ್‌, ಉಪಾಧ್ಯಕ್ಷೆ ವೀಣಾ ಸುರೇಶ್, ನಿವೃತ್ತ ಶಿಕ್ಷಕ ಸುಂದರೇಶ್, ಚಂದ್ರಿಕಾ ಮನೋಹರ್‌ ಉಪಸ್ಥಿತರಿದ್ದರು.

ಸಾಂಸ್ಕೃತಿಕ ಸಂಭ್ರಮ: ಬಳಿಕ ಒಡಿಶಾದ ಕಟಕ್‌ನ ಮಯೂರಿ ಶಾಲೆಯ ಮಮತಾ ಓಜಾ,  ಮಾನಸಿ ಪ್ರಿಯದರ್ಶಿನಿ, ಧರಾಶ್ರೀ ಮಹಾರಾಣಾ ತಂಡದವರು ಶ್ರೀರಾಮಚರಿತೆ ದಶಾವತಾರ ನೃತ್ಯ ರೂಪಕ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.