ADVERTISEMENT

ಬೊಮ್ಮನಹಳ್ಳಿ: ವಾತಾವರಣ ದೂಳುಮಯ, ಗುಂಡಿಗಳ ನಡುವೆ ರಸ್ತೆ!

ಅಗೆದ ರಸ್ತೆಯನ್ನು ಮುಚ್ಚುವುದು ಯಾವಾಗ– ಸ್ಥಳೀಯರ ಪ್ರಶ್ನೆ

ಲಿಂಗರಾಜು
Published 20 ಮಾರ್ಚ್ 2022, 20:21 IST
Last Updated 20 ಮಾರ್ಚ್ 2022, 20:21 IST
ಗಾರ್ವೆಬಾವಿಪಾಳ್ಯದಲ್ಲಿ ಬೆಸ್ಕಾಂ ಕಾಮಗಾರಿ ಸಲುವಾಗಿ ರಸ್ತೆ ಅಗೆದಿರುವುದು
ಗಾರ್ವೆಬಾವಿಪಾಳ್ಯದಲ್ಲಿ ಬೆಸ್ಕಾಂ ಕಾಮಗಾರಿ ಸಲುವಾಗಿ ರಸ್ತೆ ಅಗೆದಿರುವುದು   

ಬೊಮ್ಮನಹಳ್ಳಿ: ಕಾಮಗಾರಿಗಳ ಸಲುವಾಗಿ ಅಲ್ಲಲ್ಲಿ ಅಗೆದ ರಸ್ತೆಗಳು, ವಾತಾವರಣದ ತುಂಬೆಲ್ಲಾ ದೂಳು. ಇದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ನಿವಾಸಿಗಳ ನಿತ್ಯದ ಗೋಳು.

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾವೇರಿ ನೀರು ಪೂರೈಕೆ ಕೊಳವೆಮಾರ್ಗ ಹಾಗೂ ಒಳಚರಂಡಿ ಕೊಳವೆಗಳ ಅಳವಡಿಕೆಗಾಗಿ ಜಲಮಂಡಳಿಯವರು ರಸ್ತೆಗಳನ್ನು ಅನೇಕ ಕಡೆ ಅಗೆದಿದ್ದಾರೆ. ನೆಲದಡಿಯಲ್ಲಿ ವಿದ್ಯುತ್ ಕೇಬಲ್‌ಗಳನ್ನು ಅಳವಡಿಸುವುದಕ್ಕೆ ಬೆಸ್ಕಾಂ ವತಿಯಿಂದಲೂ ರಸ್ತೆಗಳನ್ನು ಅಲ್ಲಲ್ಲಿ ಅಗೆಯಲಾಗಿದೆ. ಇದರಿಂದ ಈ ಪ್ರದೇಶದ ವಾತಾವರಣ ದೂಳುಮಯವಾಗಿದೆ. ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿದೆ ಎಂದು ದೂರುತ್ತಿದ್ದಾರೆ ಸಾರ್ವಜನಿಕರು.

ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ರಸ್ತೆಗಳನ್ನು ಅಗೆಯುವುದು ಅನಿವಾರ್ಯ. ಆದರೆ, ರಸ್ತೆ ಅಗೆಯುವುದಕ್ಕೆ ತೋರಿಸುವಷ್ಟೇ ಉತ್ಸಾಹವನ್ನು, ಗುಂಡಿ ಮುಚ್ಚುವ ವಿಚಾರದಲ್ಲೂ ತೋರಿಸಬೇಕಲ್ಲವೇ ಎಂಬುದು ಸ್ಥಳೀಯ ನಿವಾಸಿಗಳ ಪ್ರಶ್ನೆ.

ADVERTISEMENT

ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ, ಕಿರಿದಾದ ಬೇಗೂರು ರಸ್ತೆಯಲ್ಲಿ ಜಲಮಂಡಳಿಯು ಒಳಚರಂಡಿ ಮಾರ್ಗಕ್ಕಾಗಿ ರಸ್ತೆ ಅಗೆದಿದೆ. ಇಲ್ಲಿನ ರಸ್ತೆಗಳಲ್ಲಿ ಸಂಚರಿಸುವುದೇ ದುಸ್ತರವಾಗಿಬಿಟ್ಟಿದೆ. ವಾಹನ ದಟ್ಟಣೆ ವಿಪರೀತ ಹೆಚ್ಚಾಗಿದೆ. ಜೊತೆಗೆ ದೂಳಿನ ಸಿಂಚನವೂ ಇಲ್ಲಿ ತಪ್ಪಿದ್ದಲ್ಲ.ಕೆಲ

ಖಾಸಗಿ ಕಂಪನಿಗಳು ಆಪ್ಟಿಕ್ ಫೈಬರ್‌ ಕೇಬಲ್‌ (ಒಎಫ್‌ಸಿ) ಅಳವಡಿಕೆಗಾಗಿಯೂ ಅಲ್ಲಲ್ಲಿ ರಸ್ತೆ ಅಗೆದಿವೆ. ಕೆಲಸ ಮುಗಿಸಿದ ನಂತರ, ರಸ್ತೆಯನ್ನು ದುರಸ್ತಿಗೊಳಿಸದೆ ಹಾಗೇ ಬಿಟ್ಟಿವೆ ಎಂಬ ದೂರುಗಳೂ ಇವೆ. ಅನುಮತಿ ಪಡೆಯದೆಯೇ ರಸ್ತೆಗಳನ್ನು ಅಗೆದಿದ್ದರೂ ಅಂತಹ ಕಂಪನಿಗಳ ವಿರುದ್ಧ ಬಿಬಿಎಂಪಿ ಕ್ರಮಕೈಗೊಂಡಿಲ್ಲ. ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಲೂ ಮುಂದಾಗಿಲ್ಲ ಎನ್ನುತ್ತಾರೆ ಸ್ಥಳೀಯರು.

‘ರಸ್ತೆ ಗುಂಡಿಗಳನ್ನು ಮುಚ್ಚಿ ಎಂದು ಬಿಬಿಎಂಪಿಗೆ ಹೈಕೋರ್ಟ್‌ ಪದೇ ಪದೇ ತಾಕೀತು ಮಾಡುತ್ತಲೇ ಇದೆ. ಇನ್ನೊಂದೆಡೆ ರಸ್ತೆಗಳನ್ನು ಅಗೆದು, ಹಾಗೆ ಬಿಟ್ಟು ಹೋಗುವ ಪರಿಪಾಟ ಹೆಚ್ಚಾಗುತ್ತಲೇ ಸಾಗುತ್ತಿದೆ. ಇದು ದುರದೃಷ್ಟಕರ’ ಎನ್ನುತ್ತಾರೆ ಗಾರ್ವೆಬಾವಿಪಾಳ್ಯ ನಿವಾಸಿ ಕನಕರಾಜ್.

‘ಒಳಚರಂಡಿ ಕೊಳವೆ ಅಳವಡಿಕೆಗಾಗಿ ರಸ್ತೆ ಅಗೆದರು. ಕಾಮಗಾರಿ ಮುಗಿದರೂ ರಸ್ತೆಗಳನ್ನು ಇನ್ನೂಸರಿಪಡಿಸಿಲ್ಲ. ಇದರಿಂದಾಗಿ ಮನೆಯೊಳಗೆ ದೂಳು ತುಂಬಿಕೊಳ್ಳುತ್ತಿದೆ. ರಸ್ತೆಯನ್ನು ಆದಷ್ಟು ಬೇಗ ದುರಸ್ತಿ ಮಾಡಿದರೆ ನಾವು ತುಸು ನೆಮ್ಮದಿಯಿಂದ ಉಸಿರಾಡಬಹುದು’ ಎನ್ನುತ್ತಾರೆ ಚಿಕ್ಕಬೇಗೂರು ಗೇಟ್ ನಿವಾಸಿ ಕೆ.ಸಿ.ಪ್ರತಾಪ್.

‘ಕಾಮಗಾರಿಗಾಗಿ ರಸ್ತೆ ಅಗೆಯುವ ಮುನ್ನವೇಬೆಸ್ಕಾಂ, ಜಲಮಂಡಳಿಯವರು ಬಿಬಿಎಂಪಿಯಿಂದ ಅನುಮತಿ ಪಡೆದುಕೊಳ್ಳುತ್ತಾರೆ. ರಸ್ತೆಯನ್ನು ಮತ್ತೆ ಮೊದಲಿನ ಸ್ಥಿತಿಗೆ ತರುವ ವೆಚ್ಚವನ್ನೂ ಅವರೇ ಭರಿಸುತ್ತಾರೆ. ಒಎಫ್‌ಸಿ ಅಳವಡಿಸಲು ರಸ್ತೆ ಅಗೆಯುವ ಮುನ್ನ ಖಾಸಗಿ ಕಂಪನಿಗಳು ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು. ಒಎಫ್‌ಸಿ ಅಳವಡಿಕೆಗೆ ರಸ್ತೆ ಅಗೆದರೆ ಅದನ್ನು ದುರಸ್ತಿಗೊಳಿಸುವ ಜವಾಬ್ದಾರಿಯೂ ಅವರದ್ದೇ ಆಗಿರುತ್ತದೆ’ ಎನ್ನುತ್ತಾರೆ ಬಿಬಿಎಂಪಿ ಬೊಮ್ಮನಹಳ್ಳಿ ವಲಯದ ಮುಖ್ಯ ಎಂಜಿನಿಯರ್ ಶಶಿಕುಮಾರ್.

ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಸತೀಶ್ ರೆಡ್ಡಿ, ‘ಬೆಸ್ಕಾಂ ಹಾಗೂ ಜಲಮಂಡಳಿಯವರು ಕೈಗೊಂಡಿರುವ ಕಾಮಗಾರಿ ಇನ್ನೂ ಕೆಲವೆಡೆ ಪ್ರಗತಿಯಲ್ಲಿದೆ. ಎಲ್ಲ ಕಾಮಗಾರಿಗಳು ಪೂರ್ಣಗೊಂಡ ಕೂಡಲೇ ರಸ್ತೆ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

ಬೊಮ್ಮನಹಳ್ಳಿ ಕ್ಷೇತ್ರ: ಜನಸ್ಪಂದನ 26ರಂದು
ಬೆಂಗಳೂರು: ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಜನರ ಅಹವಾಲು ಆಲಿಸುವ ಸಲುವಾಗಿ ‘ಪ್ರಜಾವಾಣಿ– ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳ ವತಿಯಿಂದ ಇದೇ 26ರಂದು ಜೆ.ಪಿ.ನಗರ ಆರನೇ ಹಂತದ ಗಣೇಶ ದೇವಸ್ಥಾನ ಮೈದಾನದಲ್ಲಿ ‘ಜನ ಸ್ಪಂದನ’ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಶಾಸಕ ಎಂ.ಸತೀಶ ರೆಡ್ಡಿ, ಬಿಬಿಎಂಪಿ, ಜಲಮಂಡಳಿ, ಬಿಡಿಎ, ಬೆಸ್ಕಾಂ, ಪೊಲೀಸ್‌ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕರ ಅಹವಾಲು ಆಲಿಸಲಿದ್ದಾರೆ. ಈ ಕ್ಷೇತ್ರದ ನಿವಾಸಿಗಳು ಸ್ಥಳೀಯ ಸಮಸ್ಯೆಗಳನ್ನು ನೇರವಾಗಿ ಶಾಸಕರ ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬಹುದು.

ಆಸಕ್ತರು ಬೆಳಿಗ್ಗೆ 9ರಿಂದ ಸ್ಥಳದಲ್ಲೇ ಹೆಸರು ನೋಂದಾಯಿಸಬಹುದು. ಮೊದಲು ನೋಂದಣಿ ಮಾಡಿಸಿದವರಿಗೆ ಆದ್ಯತೆ. ಬೆಳಿಗ್ಗೆ 10ರಿಂದ ಮಧ್ಯಾಹ್ನ 12 ಗಂಟೆವರೆಗೆ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದ ಸ್ಥಳ: ಗಣೇಶ ಮೈದಾನ, 186, ಪುಟ್ಟೇನಹಳ್ಳಿ ರಸ್ತೆ, ಕೆ.ಆರ್‌.ಬಡಾವಣೆ, ಜೆ.ಪಿ.ನಗರ ಆರನೇ ಹಂತ, ಬೆಂಗಳೂರು–78

ಸಂಪರ್ಕ: 9448528998

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.