ADVERTISEMENT

ಅರ್ಧಕ್ಕೆ ನಿಂತ ಕಾಮಗಾರಿ: ಸ್ಥಳೀಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2021, 18:28 IST
Last Updated 1 ಫೆಬ್ರುವರಿ 2021, 18:28 IST
ಅವೆನ್ಯೂ ರಸ್ತೆಯಲ್ಲಿಅರ್ಧಕ್ಕೆ ನಿಂತಿರುವ ಕಾಮಗಾರಿಯಿಂದ ಕಿರಿದಾದ ರಸ್ತೆ ದಾಟಲು ಪರದಾಡುತ್ತಿರುವ ಸಾರ್ವಜನಿಕರು -ಪ್ರಜಾವಾಣಿ ಚಿತ್ರ/ರಂಜು.ಪಿ
ಅವೆನ್ಯೂ ರಸ್ತೆಯಲ್ಲಿಅರ್ಧಕ್ಕೆ ನಿಂತಿರುವ ಕಾಮಗಾರಿಯಿಂದ ಕಿರಿದಾದ ರಸ್ತೆ ದಾಟಲು ಪರದಾಡುತ್ತಿರುವ ಸಾರ್ವಜನಿಕರು -ಪ್ರಜಾವಾಣಿ ಚಿತ್ರ/ರಂಜು.ಪಿ   

ಬೆಂಗಳೂರು: ನಿತ್ಯ ಸಾವಿರಾರು ಜನರು ಭೇಟಿ ನೀಡುವ ಅವೆನ್ಯೂ ರಸ್ತೆಯಲ್ಲಿ ಕೈಗೆತ್ತಿಕೊಂಡಿರುವ ಸ್ಮಾರ್ಟ್‌ಸಿಟಿ ಯೋಜನೆಯ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಇದರಿಂದ ಇಲ್ಲಿ ಪಾದಚಾರಿಗಳಿಗೆ ಹಾಗೂ ವ್ಯಾಪಾರಿಗಳಿಗೆ ಸಮಸ್ಯೆಯಾಗಿದೆ.

ಕಾಮಗಾರಿಯನ್ನು ವೇಗವಾಗಿ ಪೂರ್ಣಗೊಳಿಸಿ, ಜನಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ವ್ಯಾಪಾರಿಗಳು ಆಗ್ರಹಿಸಿದ್ದಾರೆ.

‘ಜನವರಿಯಲ್ಲಿ ಅವೆನ್ಯೂ ರಸ್ತೆಯ ಕಾಮತ್‌ ಹೋಟೆಲ್‌ನಿಂದ ಅಂದಾಜು 200 ಮೀಟರ್‌ಗಳವರೆಗೆ ಪಾದಚಾರಿ ಮಾರ್ಗವನ್ನು ಅಗೆಯಲಾಗಿದೆ. ಒಂದು ವಾರಗಳವರೆಗೆ ಮಾತ್ರ ಕಾಮಗಾರಿ ಚುರುಕಾಗಿ ನಡೆಯಿತು. ಒಂದು ವಾರದಿಂದ ಇಲ್ಲಿನ ಕಾಮಗಾರಿ ಅರ್ಧಕ್ಕೆ ನಿಂತಿದೆ’ ಎಂದು ಅವೆನ್ಯೂ ರಸ್ತೆಯ ಶಾಂತಿ ಮೆಡಿಕಲ್ಸ್‌ನ ವಿವೇಕ್ ತಿಳಿಸಿದರು.

ADVERTISEMENT

‘ಅವೆನ್ಯೂ ರಸ್ತೆ ಅತಿ ಹೆಚ್ಚು ಜನ ಸಂಚರಿಸುವ ಪ್ರಮುಖ ಸ್ಥಳ. ಈ ರಸ್ತೆ ವ್ಯಾಪಾರಕ್ಕೆ ಹೆಸರುವಾಸಿ. ಪ್ರತಿದಿನ ಬೇರೆ ಸ್ಥಳಗಳಿಂದ ಜನರು ಇಲ್ಲಿಗೆ ಖರೀದಿಗೆ ಬರುತ್ತಾರೆ. ಈಗ ಪಾದಚಾರಿ ಮಾರ್ಗ ಅಗೆದಿರುವುದರಿಂದ ಗ್ರಾಹಕರು ಮಳಿಗೆಗಳಿಗೆ ಬರಲು ಹಿಂದೇಟು ಹಾಕುತ್ತಾರೆ. ಇದರಿಂದ ವ್ಯಾಪಾರಕ್ಕೂ ಹೊಡೆತ ಬಿದ್ದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕಾಮಗಾರಿ ನಡೆಯುತ್ತಿರುವುದು ಒಳ್ಳೆಯದೇ. ಆದರೆ, ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿರುವುದರಿಂದ ಆಳವಾದ ಹಳ್ಳವನ್ನು ದಾಟಿ ಇಲ್ಲಿನ ಅಂಗಡಿಗಳಿಗೆ ಸಾರ್ವಜನಿಕರು ಬರಬೇಕಾಗಿದೆ. ಇದೇ ರೀತಿ ಔಷಧ ಕೊಳ್ಳಲು ಬಂದ ವೃದ್ಧರಿಬ್ಬರು ಕಾಲು ಜಾರಿ ಹಳ್ಳಕ್ಕೆ ಬಿದ್ದರು. ಅವರನ್ನು ರಕ್ಷಿಸಲಾಯಿತು. ಕಾಮಗಾರಿಯನ್ನು ವೇಗವಾಗಿ ಪೂರ್ಣಗೊಳಿಸಿದರೆ ಎಲ್ಲರಿಗೂ ಅನುಕೂಲ’ ಎಂದು ಮನವಿ ಮಾಡಿದರು.

‘ಕಾಮಗಾರಿಗಾಗಿ ಪಾದಚಾರಿ ಮಾರ್ಗ ಕೆಡವಿರುವುದರಿಂದ ಸಾರ್ವಜನಿಕರಿಗೆ ನಡೆಯಲು ಜಾಗವೇ ಇಲ್ಲ. ರಸ್ತೆ ಮಧ್ಯದಲ್ಲಿ ಸಂಚರಿಸಿದರೆ ವೇಗವಾಗಿ ಬರುವ ವಾಹನಗಳ ಕಿರಿಕಿರಿ. ಈ ಸಮಸ್ಯೆಗೆ ಶೀಘ್ರವೇ ಮುಕ್ತಿ ನೀಡಬೇಕು’ ಎನ್ನುತ್ತಾರೆ ಸ್ಥಳೀಯ ನಿವಾಸಿ ಗೋಪಾಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.