ADVERTISEMENT

ಸೆ.17ರ ವೇಳೆಗೆ ರಸ್ತೆಗಳ ಗುಂಡಿ ದುರಸ್ತಿ: ಬಿಬಿಎಂಪಿ ಮುಖ್ಯ ಆಯುಕ್ತ

ವಾರದಲ್ಲಿ ಎರಡನೇ ಬಾರಿಗೆ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ನಗರದಲ್ಲಿ ರಾತ್ರಿ ಸಂಚಾರ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2024, 21:28 IST
Last Updated 13 ಸೆಪ್ಟೆಂಬರ್ 2024, 21:28 IST
ಸಿದ್ದಾಪುರ ಜಂಕ್ಷನ್ ನಲ್ಲಿ ರಸ್ತೆ ಡಾಂಬರೀಕರಣವನ್ನು ಶುಕ್ರವಾರ ರಾತ್ರಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪರಿಶೀಲಿಸಿದರು
ಸಿದ್ದಾಪುರ ಜಂಕ್ಷನ್ ನಲ್ಲಿ ರಸ್ತೆ ಡಾಂಬರೀಕರಣವನ್ನು ಶುಕ್ರವಾರ ರಾತ್ರಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪರಿಶೀಲಿಸಿದರು   

ಬೆಂಗಳೂರು: ‘ರಸ್ತೆಗಳನ್ನು ಗುಂಡಿಮುಕ್ತಗೊಳಿಸಬೇಕು’ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೂಚನೆಯನ್ನು ಪಾಲಿಸಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಈ ವಾರದಲ್ಲಿ ಎರಡನೇ ಬಾರಿಗೆ ‘ರಾತ್ರಿ ಸಂಚಾರ’ ನಡೆಸಿದರು.

ಶುಕ್ರವಾರ ರಾತ್ರಿ ನಗರದ ಹಲವು ರಸ್ತೆಗಳಲ್ಲಿ ಸಂಚರಿಸಿ, ರಸ್ತೆ ಗುಂಡಿಗಳು ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲಿಸಿದರು.

ಬಿಬಿಎಂಪಿಯ ಎಂಟು ವಲಯದಲ್ಲಿ ಸುಮಾರು ಎರಡು ಸಾವಿರ ಗುಂಡಿಗಳಿದ್ದು, ಅವುಗಳನ್ನು ಸೆ.17ರ ವೇಳೆಗೆ ಎಲ್ಲವನ್ನೂ ಮುಚ್ಚಲಾಗುವುದು ಎಂದು ತಿಳಿಸಿದರು.

ADVERTISEMENT

ಎಲ್ಲ ವಲಯಗಳಲ್ಲೂ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ಪ್ರಗತಿಯಲ್ಲಿದ್ದು, ಅತಿ ಶೀಘ್ರದಲ್ಲಿ ಕಾಮಗಾರಿ ಮುಗಿಯಲಿದೆ ಎಂದರು.

ರಸ್ತೆ ಮೂಲಸೌಕರ್ಯ ವಿಭಾಗ ಹಾಗೂ ಪ್ರಮುಖ ರಸ್ತೆಗಳ ವಿಭಾಗದಿಂದ ನಿರ್ವಹಣೆ ಮಾಡುತ್ತಿರುವ ರಸ್ತೆಗಳಲ್ಲೇ ಹೆಚ್ಚು ಗುಂಡಿಗಳಿವೆ. ಆ ವಿಭಾಗದ ಎಂಜಿನಿಯರ್ ಗಳಿಗೆ ಶೀಘ್ರ ದುರಸ್ತಿ ಕಾರ್ಯ ಕೈಗೊಳ್ಳಲು ಸೂಚಿಸಲಾಗಿದೆ ಎಂದು ತುಷಾರ್ ಗಿರಿನಾಥ್ ಹೇಳಿದರು.

ದಕ್ಷಿಣ ವಲಯದ ಲಾಲ್ ಬಾಗ್ ಮುಖ್ಯ ರಸ್ತೆ ಸಿದ್ದಾಪುರ ಜಂಕ್ಷನ್ ನಲ್ಲಿ ರಸ್ತೆ ಮೇಲ್ಮೈ ಪದರ ಹಾಳಾಗಿದ್ದು, ಅದಕ್ಕೆ ಡಾಂಬರೀಕರಣ ಮಾಡುವುದನ್ನು ಪರಿಶೀಲಿಸಿದರು. ಗುಣಮಟ್ಟ ಕಾಪಾಡಲು ಎಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು .

ಮಡಿವಾಳ ಜಂಕ್ಷನ್ ನಲ್ಲಿ ಮೆಟ್ರೊ ಕೆಲಸ ನಡೆಯುತ್ತಿದ್ದು, ಈ ಪ್ರದೇಶದಲ್ಲಿ ರಸ್ತೆಯನ್ನು ಸುಸ್ಥಿತಿಗೆ ತರುವ ಕಾಮಗಾರಿಯನ್ನು ಬಿಎಂ ಆರ್ ಸಿ ಎಲ್ ನವರು ಮಾಡಲು ಒಪ್ಪಿದ್ದಾರೆ. ಮಳೆ ಬಂದಾಗ ಬೇಗೂರು ಭಾಗದಿಂದ ಹೆಚ್ಚು ನೀರು ಬರುತ್ತದೆ. ಆಗ ಇಲ್ಲಿ ಹೆಚ್ಚಿನ ಸಮಸ್ಯೆ ಆಗುತ್ತಿದ್ದು, ಮತ್ತೊಂದು ಚರಂಡಿ ಮಾಡಲೂ ನಿರ್ಧರಿಸಲಾಗಿದೆ ಎಂದು ತುಷಾರ್ ಗಿರಿನಾಥ್ ತಿಳಿಸಿದರು.

ದಕ್ಷಿಣ ವಲಯ ಆಯುಕ್ತೆ ವಿನೋತ್ ಪ್ರಿಯಾ, ಜಂಟಿ ಆಯುಕ್ತ ಶಿವಕುಮಾರ್ ಉಪಸ್ಥಿತರಿದ್ದರು.

ಈಜಿಪುರ ಮೇಲ್ಸೇತುವೆ: ಗುತ್ತಿಗೆದಾರರಿಗೆ ₹25 ಲಕ್ಷ ದಂಡ

ಈಜಿಪುರ ಮೇಲ್ಸೇತುವೆ ಕಾಮಗಾರಿಯನ್ನು ನಿಧಾನವಾಗಿರುವುದಕ್ಕೆ ಗುತ್ತಿಗೆದಾರರಿಗೆ ₹25 ಲಕ್ಷ ದಂಡ ವಿಧಿಸಲಾಗಿದೆ ಎಂದು ತುಷಾರ್ ಗಿರಿನಾಥ್ ತಿಳಿಸಿದರು. ಶುಕ್ರವಾರ ರಾತ್ರಿ ಮೇಲ್ಸೇತುವೆ ಕಾಮಗಾರಿಯನ್ನು ಪರಿಶೀಲಿಸಿ ಅವಧಿಯೊಳಗೆ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಈಜಿಪುರ ಮೇಲ್ಸೇತುವೆಯ ಕಾಮಗಾರಿಯಲ್ಲಿ 27 ಪೈಲಿಂಗ್‌ಗಳು 3 ಪ್ರೀಕಾಸ್ಟ್ ಸೆಗ್ಮೆಂಟ್ ನಿರ್ಮಾಣ 9 ಪ್ರೀಕಾಸ್ಟ್ ಸೆಗ್ಮೆಂಟ್ ಲಾಂಚಿಂಗ್ ರ್ಯಾಂಪ್ ನಿರ್ಮಾಣ ಮೇಲ್ಸೇತುವೆಯ ಕೆಳಗಿನ ರಸ್ತೆ ಪಾದಚಾರಿ ಮಾರ್ಗ ಮತ್ತು ಮಳೆ ನೀರು ಚರಂಡಿ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ ಎಂದು ಯೋಜನೆ ವಿಭಾಗದ ಮುಖ್ಯ ಎಂಜಿನಿಯರ್ ಲೋಕೇಶ್ ಮಾಹಿತಿ ನೀಡಿದರು.

ರಕ್ಷಣಾ ಇಲಾಖೆಗೆ ಸಂಬಂಧಿಸಿದ ಜಾಗವನ್ನು ಹಸ್ತಾಂತರಿಸಿಕೊಂಡು ಕಾಮಗಾರಿಯನ್ನು ನಿರ್ವಹಿಸಲಾಗುತ್ತಿದೆ. ಸೇಂಟ್ ಜಾನ್ಸ್ ಸಂಸ್ಥೆಯವರೊಂದಿಗೆ ಸಭೆ ನಡೆಸಿ ಯೋಜನೆಗೆ ಪ್ರಮುಖವಾಗಿ ಅಗತ್ಯವಿರುವ ಜಾಗವನ್ನು ಹಸ್ತಾಂತರಿಸಲು ಮನವಿ ಮಾಡಲಾಗಿದೆ. ಗುತ್ತಿಗೆದಾರರಿಗೆ ಕರಾರಿನಂತೆ ಮುಂಗಡ ಹಣ ಪಾವತಿಯಾಗಿದ್ದು ಬಾಕಿ ಇದ್ದ ಬಿಲ್ಲನ್ನು ಸಹ ಪಾವತಿ ಮಾಡಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.