ADVERTISEMENT

ರಸ್ತೆ ಸುರಕ್ಷತೆ; ತಮಿಳುನಾಡು ಮಾದರಿ ಅಧ್ಯಯನ: ಸಾರಿಗೆ ಆಯುಕ್ತ ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 19:32 IST
Last Updated 23 ಸೆಪ್ಟೆಂಬರ್ 2021, 19:32 IST
ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ ಕುರಿತ ಸಮಾಲೋಚನಾ ಸಭೆಯಲ್ಲಿ ಪಿಎಎಫ್ ಕಾರ್ಯನಿರ್ವಾಹಕ ನಿರ್ದೇಶಕಿ ಡಾ.ಅನ್ನಪೂರ್ಣ ರವಿಚಂದರ್, ನಿವೃತ್ತ ಡಿಜಿಪಿ ಅಜಯ್ ಸಿಂಗ್, ಪಿಎಎಫ್ ನಿರ್ದೇಶಕ ಜಿ. ಗುರುಚರಣ್, ಪಿಎಎಫ್ ಅಧ್ಯಕ್ಷ ಸುಧಾಕರ್ ರಾವ್ ಮತ್ತು ಸಿಯುಟಿಎಸ್ ನಿರ್ದೇಶಕ ಜಾರ್ಜ್ ಚೆರಿಯನ್ ಭಾಗವಹಿಸಿದ್ದರು –ಪ್ರಜಾವಾಣಿ ಚಿತ್ರ
ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ ಕುರಿತ ಸಮಾಲೋಚನಾ ಸಭೆಯಲ್ಲಿ ಪಿಎಎಫ್ ಕಾರ್ಯನಿರ್ವಾಹಕ ನಿರ್ದೇಶಕಿ ಡಾ.ಅನ್ನಪೂರ್ಣ ರವಿಚಂದರ್, ನಿವೃತ್ತ ಡಿಜಿಪಿ ಅಜಯ್ ಸಿಂಗ್, ಪಿಎಎಫ್ ನಿರ್ದೇಶಕ ಜಿ. ಗುರುಚರಣ್, ಪಿಎಎಫ್ ಅಧ್ಯಕ್ಷ ಸುಧಾಕರ್ ರಾವ್ ಮತ್ತು ಸಿಯುಟಿಎಸ್ ನಿರ್ದೇಶಕ ಜಾರ್ಜ್ ಚೆರಿಯನ್ ಭಾಗವಹಿಸಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ವಿವಿಧ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡಿರುವುದರಿಂದ ತಮಿಳುನಾಡಿನಲ್ಲಿ ಅಪಘಾತಗಳು ಕಡಿಮೆಯಾಗಿವೆ. ತಮಿಳುನಾಡಿನ ಈ ಮಾದರಿಯನ್ನು ಅಧ್ಯಯನ ಮಾಡಲಾಗುತ್ತಿದೆ’ ಎಂದು ಸಾರಿಗೆ ಆಯುಕ್ತ ಎನ್‌. ಶಿವಕುಮಾರ್‌ ತಿಳಿಸಿದರು.

ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ ಕುರಿತು ’ಪಬ್ಲಿಕ್‌ ಅಫೇರ್ಸ್‌ ಫೌಂಡೇಷನ್‌’ (ಪಿಎಎಫ್‌) ಮತ್ತು ‘ಕನ್ಸೂಮರ್‌ ಯುನಿಟಿ ಆ್ಯಂಡ್‌ ಟ್ರಸ್ಟ್‌ ಸೊಸೈಟಿ’(ಸಿಯುಟಿಸ್‌) ಗುರುವಾರ ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ಈ ವಿಷಯ ತಿಳಿಸಿದರು.

‘ತುರ್ತು ಆರೈಕೆ ಮತ್ತು ಟ್ರಾಮಾ ಕೇರ್‌ ಕೇಂದ್ರಗಳನ್ನು ಸ್ಥಾಪಿಸುವ ಜತೆಗೆ, ಅಪಘಾತ ಸಂಭವಿಸಿದ ಸ್ಥಳಕ್ಕೆ ತ್ವರಿತಗತಿಯಲ್ಲಿ ಆಂಬುಲೆನ್ಸ್‌ಗಳು ಧಾವಿಸುವಂತೆ ವ್ಯವಸ್ಥಿತ ಯೋಜನೆಯನ್ನು ತಮಿಳುನಾಡಿನಲ್ಲಿ ರೂಪಿಸಲಾಗಿದೆ. ಇದರಿಂದ, ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ ತಕ್ಷಣಕ್ಕೆ ಚಿಕಿತ್ಸೆ ದೊರೆಯುತ್ತಿರುವುದರಿಂದ ಸಾವಿಗೀಡಾಗುವವರ ಸಂಖ್ಯೆ ಕಡಿಮೆಯಾಗಿದೆ. ಇಂತಹ ಹಲವಾರು ಅಂಶಗಳನ್ನು ಅಧ್ಯಯನ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ADVERTISEMENT

‘ರಾಜ್ಯದಲ್ಲಿ 2.7 ಕೋಟಿ ವಾಹನಗಳ ನೋಂದಣಿಯಾಗಿವೆ. ಅಂದರೆ, ರಾಜ್ಯದ ಜನಸಂಖ್ಯೆಯಲ್ಲಿನ ಪ್ರತಿ ಮೂರನೇ ವ್ಯಕ್ತಿ ಯಾವುದಾದರೂ ಒಂದು ವಾಹನ ಬಳಸುತ್ತಿದ್ದಾರೆ. ಆದರೆ, ರಸ್ತೆಗಳ ಸಂಖ್ಯೆ ಹೆಚ್ಚಾಗಿಲ್ಲ. ಅಪಘಾತಗಳನ್ನು ತಡೆಯಲು ಉತ್ತಮ ರಸ್ತೆಗಳು ಸಹ ಮುಖ್ಯವಾಗುತ್ತವೆ’ ಎಂದು ಹೇಳಿದರು.

ಸಿಯುಟಿಎಸ್‌ ನಿರ್ದೇಶಕ ಜಾರ್ಜ್‌ ಚೆರಿಯನ್‌ ಮಾತನಾಡಿ, ‘ನಗರಗಳಲ್ಲಿ ರಸ್ತೆ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ವೇಗದ ಮಿತಿಯನ್ನು ಪ್ರತಿ ಗಂಟೆಗೆ 30 ಕಿಲೋ ಮೀಟರ್‌ ನಿಗದಿಪಡಿಸುವಂತೆ ಜಾಗತಿಕ ಅಭಿಯಾನ ನಡೆಯುತ್ತಿದೆ’ ಎಂದು ಹೇಳಿದರು.

‘ಅಪಘಾತಗಳಲ್ಲಿ ಯುವಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾಗುತ್ತಿದ್ದಾರೆ. ರಸ್ತೆ ಅಪಘಾತಗಳಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಅತಿಯಾದ ವೇಗವೇ ಅಪಘಾತಕ್ಕೆ ಪ್ರಮುಖ ಕಾರಣ. ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾದ ನಂತರ 2020ರಲ್ಲಿ ದೇಶದಲ್ಲಿ ಶೇಕಡ 18ರಷ್ಟು ಅಪಘಾತಗಳು ಕಡಿಮೆಯಾಗಿವೆ. ಅಂದರೆ, 6 ಲಕ್ಷ ಅಪಘಾತಗಳು ಕಡಿಮೆಯಾಗಿವೆ. ಕೋವಿಡ್‌–19ನಿಂದಾಗಿ ಜಾರಿಗೊಳಿಸಿದ ಲಾಕ್‌ಡೌನ್‌ ಸಹ ಇದಕ್ಕೆ ಕಾರಣ‌’ ಎಂದು ವಿವರಿಸಿದರು.

ಪಿಎಎಫ್‌ ಅಧ್ಯಕ್ಷ ಸುಧಾಕರ್‌ ರಾವ್‌, ಕಾರ್ಯನಿರ್ವಾಹಕ ನಿರ್ದೇಶಕಿ ಡಾ. ಅನ್ನಪೂರ್ಣ ರವಿಚಂದರ್‌, ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಅಜಯ್ ಕುಮಾರ್ ಸಿಂಗ್, ಸಂಚಾರ ವಿಭಾಗದ ಜಂಟಿ ಕಮಿಷನರ್ ಡಾ. ಬಿ.ಆರ್. ರವಿಕಾಂತೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.