ADVERTISEMENT

ಸುಲಿಗೆಗೆ ಪೇಟಿಎಂ, ಫೋನ್‌ ಪೇ ಬಳಕೆ!

ಪೊಲೀಸ್ ಭಾತ್ಮೀದಾರರಂತೆ ಬಂದ ದರೋಡೆಕೋರರು

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 18:47 IST
Last Updated 8 ಡಿಸೆಂಬರ್ 2018, 18:47 IST

ಬೆಂಗಳೂರು: ಪೊಲೀಸ್ ಭಾತ್ಮೀದಾರರ ಸೋಗಿನಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿಗಳಿಬ್ಬರು, ದಂತ ವೈದ್ಯಕೀಯ ವಿದ್ಯಾರ್ಥಿಯನ್ನು ಬೆದರಿಸಿ ಪೇಟಿಎಂ ಹಾಗೂ ಫೋನ್‌ ಪೇ ಮೂಲಕ ₹ 63 ಸಾವಿರವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ಹೋಗಿದ್ದಾರೆ.

ಚೋಳನಾಯಕನಹಳ್ಳಿಯಲ್ಲಿ ಡಿ.3ರಂದು ಈ ಘಟನೆ ನಡೆದಿದ್ದು, ವಿದ್ಯಾರ್ಥಿ ನವೀನ್ ಹೆಬ್ಬಾಳ ಠಾಣೆಗೆ ದೂರು ಕೊಟ್ಟಿದ್ದಾರೆ. ಪೊಲೀಸರು ಬ್ಯಾಂಕ್ ಖಾತೆಯ ವಿವರ ಹಾಗೂ ಮೊಬೈಲ್ ಸಂಖ್ಯೆಯ ಸುಳಿವು ಆಧರಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಆಂಧ್ರಪ್ರದೇಶದ ನವೀನ್, ಒಂದೂವರೆ ವರ್ಷದ ಹಿಂದೆ ನಗರಕ್ಕೆ ಬಂದು ಯಲಹಂಕದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಡಿ.3ರ ರಾತ್ರಿ ಹೋಟೆಲ್‌ನಲ್ಲಿ ಊಟ ಮಾಡಿಕೊಂಡು ಮನೆಗೆ ಮರಳುವಾಗ ಆರೋಪಿಗಳು ಹಿಂಬಾಲಿಸಿ ಬಂದಿದ್ದಾರೆ.

ADVERTISEMENT

ತಾವೇ ಗಾಂಜಾ ಇಟ್ಟರು: ಸ್ವಲ್ಪ ಸಮಯದ ಬಳಿಕ ಮನೆಗೆ ನುಗ್ಗಿ ಗಾಂಜಾ ಪೊಟ್ಟಣಗಳನ್ನು ಟೇಬಲ್‌ ಕೆಳಗೆ ಎಸೆದಿರುವ ಅವರು, ‘ನಾವು ಪೊಲೀಸ್ ಮಾಹಿತಿದಾರರು. ನೀನು ಗಾಂಜಾ ಮಾರುತ್ತಿದ್ದೀಯಾ ಎಂಬ ಸಂಶಯವಿದೆ’ ಎಂದು ಮನೆ ಶೋಧಿಸುವಂತೆ ನಟಿಸಿದ್ದಾರೆ. ಬಳಿಕ ತಾವೇ ಎಸೆದಿದ್ದ ಗಾಂಜಾ ಪೊಟ್ಟಣಗಳನ್ನು ತೆಗೆದು, ವಿದ್ಯಾರ್ಥಿಯ ಕೈಗೆ ಕೊಟ್ಟು ಫೋಟೊಗಳನ್ನು ತೆಗೆದುಕೊಂಡಿದ್ದಾರೆ.

ಈ ಬೆಳವಣಿಗೆಯಿಂದ ಗಾಬರಿಗೆ ಬಿದ್ದ ನವೀನ್, ‘ನನ್ನ ಮನೆಯಲ್ಲಿ ಡ್ರಗ್ಸ್ ಹೇಗೆ ಬಂತು ಗೊತ್ತಿಲ್ಲ. ನಾನು ನೇರವಾಗಿ ಠಾಣೆಗೆ ಹೋಗಿ ಹೇಳಿಕೆ ಕೊಡುತ್ತೇನೆ’ ಎಂದಿದ್ದಾರೆ. ಇದರಿಂದ ಕೆರಳಿದ ಆರೋಪಿಗಳು ಚಾಕು ತೋರಿಸಿ ಹಣ ಕೊಡುವಂತೆ ಬೆದರಿಸಿದ್ದಾರೆ.

ತಮ್ಮ ಬಳಿ ನಗದು ಇಲ್ಲ ಎಂದಾಗ ಫೋನ್‌ ಪೇ ಹಾಗೂ ಪೇಟಿಎಂ ಮೂಲಕ ₹ 63 ಸಾವಿರ ವರ್ಗಾಯಿಸಿಕೊಂಡಿದ್ದಾರೆ. ಅಲ್ಲದೆ, ‘ಪೊಲೀಸರಿಗೆ ವಿಷಯ ಬಾಯ್ಬಿಟ್ಟರೆ ಹಾಗೂ ಇನ್ನೂ ₹ 50 ಸಾವಿರವನ್ನು ಖಾತೆಗೆ ಹಾಕದಿದ್ದರೆ, ಗಾಂಜಾ ಹಿಡಿದು ನಿಂತಿರುವ ನಿನ್ನ ಫೋಟೊಗಳನ್ನು ಜಾಲತಾಣಗಳಲ್ಲಿ ಹಾಕುತ್ತೇವೆ’ ಎಂದು ಬೆದರಿಸಿ ಹೋಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.