ADVERTISEMENT

ಸುಲಿಗೆ ಮಾಡಿ ಜೈಲುಪಾಲು; ಹೊರಗೆ ಬಂದು ಕಳವು

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2020, 7:54 IST
Last Updated 1 ಸೆಪ್ಟೆಂಬರ್ 2020, 7:54 IST

ಬೆಂಗಳೂರು: ಸುಲಿಗೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಜಾಮೀನು ಮೇಲೆ ಹೊರಬಂದು ಮನೆಗಳಲ್ಲಿ ಕಳವು ಮಾಡುತ್ತಿದ್ದ ಆರೋಪದಡಿ ಮೆಹಬೂಬ್ ಪಾಷಾ (22) ಎಂಬುವರನ್ನು ಸಂಜಯ್‌ನಗರ ಪೊಲೀಸರು ಬಂಧಿಸಿದ್ದಾರೆ.

‘ಚಂದ್ರಾಲೇಔಟ್ ಬಳಿಯ ಗಂಗೊಂಡನಹಳ್ಳಿಯ ಮೆಹಬೂಬ್ ಪಾಷಾ, ಅಪರಾಧ ಹಿನ್ನೆಲೆಯುಳ್ಳವ. ಆತನಿಂದ ₹2.40 ಲಕ್ಷ ಮೌಲ್ಯದ 60 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಡಾಲರ್ಸ್ ಕಾಲೊನಿಯ 3ನೇ ಮುಖ್ಯರಸ್ತೆಯಲ್ಲಿರುವ ವಿಷುಕುಮಾರ್ ಎಂಬುವರು ಜೂನ್ 18ರಂದು ಮನೆ ಬೀಗ ಹಾಕಿಕೊಂಡು ಪತ್ನಿ ಜೊತೆ ಹಾಸನಕ್ಕೆ ಹೋಗಿದ್ದರು. ಮನೆ ಮುಂದೆ ರಂಗೋಲಿ ಇಲ್ಲದಿದ್ದನ್ನು ಹಾಗೂ ಬೀಗ ಹಾಕಿದ್ದನ್ನು ಗಮನಿಸಿದ್ದ ಆರೋಪಿ, ರಾತ್ರಿ ವೇಳೆ ಮನೆಗೆ ನುಗ್ಗಿ ಕಳವು ಮಾಡಿದ್ದ.’

ADVERTISEMENT

‘ಮನೆ ಮಾಲೀಕ ವಿಷುಕುಮಾರ್ ಅವರು ಜೂ. 22ರಂದು ರಾತ್ರಿ ವಾಪಸು ಮನೆಗೆ ಬಂದಿದ್ದಾಗಲೇ ಕಳ್ಳತನ ಗಮನಕ್ಕೆ ಬಂದಿತ್ತು. ಆ ಬಗ್ಗೆ ಠಾಣೆಗೆ ದೂರು ನೀಡಿದ್ದರು. ಅದರನ್ವಯ ಆರೋಪಿಯನ್ನು ಬಂಧಿಸಲಾಗಿದೆ’ ಎಂದೂ ತಿಳಿಸಿದರು.

‘ಆರೋಪಿ ಮೆಹಬೂಬ್ ವಿರುದ್ಧ 2018ರಲ್ಲಿ ಚಂದ್ರಾಲೇಔಟ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿತ್ತು. ಅದರ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ’ ಎಂದೂ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.