ADVERTISEMENT

ಬೆಂಗಳೂರು | ಕಾರು ಅಡ್ಡಗಟ್ಟಿ ₹ 50 ಲಕ್ಷ ಸುಲಿಗೆ: ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 16 ಜುಲೈ 2023, 13:29 IST
Last Updated 16 ಜುಲೈ 2023, 13:29 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಹೊಸ ಗುಡ್ಡದಹಳ್ಳಿ ವೃತ್ತದ ಸಿಗ್ನಲ್‌ನಲ್ಲಿ ಕಾರು ಅಡ್ಡಗಟ್ಟಿ ₹ 50 ಲಕ್ಷ ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಆಟೊ ಚಾಲಕ ರಿಯಾಜ್ ಹಾಗೂ ಇಮ್ರಾನ್ ಬಂಧಿತರು. ಇವರಿಂದ ₹ 44 ಲಕ್ಷ ನಗದು, 2 ಮೊಬೈಲ್, ದ್ವಿಚಕ್ರ ವಾಹನ ಹಾಗೂ ಮಾರಕಾಸ್ತ್ರ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಹಾಗೂ ರಿಯಲ್ ಎಸ್ಟೇಟ್ ಏಜೆಂಟ್ ಆಗಿರುವ ದೂರುದಾರ, ಜುಲೈ 13ರಂದು ₹ 50 ಲಕ್ಷ ಹಣದ ಸಮೇತ ಕಾರಿನಲ್ಲಿ ಹೊರಟಿದ್ದರು. ಈ ಬಗ್ಗೆ ತಿಳಿದಿದ್ದ ನಾಲ್ವರು ಆರೋಪಿಗಳು ಕಾರು ಬೆನ್ನಟ್ಟಿದ್ದರು.’

ADVERTISEMENT

‘ಹೊಸ ಗುಡ್ಡದಹಳ್ಳಿ ಸಿಗ್ನಲ್‌ನಲ್ಲಿ ಕಾರು ನಿಂತಿದ್ದು, ಕಾರಿನ ಎದುರು ದ್ವಿಚಕ್ರ ವಾಹನ ನಿಲ್ಲಿಸಿದ್ದ ಆರೋಪಿಗಳು, ದೂರುದಾರರ ಜೊತೆ ಜಗಳ ತೆಗೆದಿದ್ದರು. ಮಾರಕಾಸ್ತ್ರದಿಂದ ಕೈಗೆ ಹೊಡೆದಿದ್ದರು. ಆಗ ಆರೋಪಿಯೊಬ್ಬ, ಕಾರಿನ ಹಿಂಬದಿ ಗಾಜು ಒಡೆದು ಹಣದ ಬ್ಯಾಗ್‌ ಎತ್ತಿಕೊಂಡು ಓಡಿಹೋಗಿದ್ದ. ದೂರುದಾರ ಬೆನ್ನಟ್ಟಿ ಹಿಡಿಯಲು ಹೋಗಿ ವಿಫಲರಾಗಿದ್ದರು. ಇತ್ತ ಉಳಿದವರು ಪರಾರಿಯಾಗಿದ್ದರು’ ಎಂದು ತಿಳಿಸಿವೆ.

‘ಸುಲಿಗೆ ಪ್ರಕರಣ ದಾಖಲಿಸಿಕೊಂಡು ಕೆಲವೇ ಗಂಟೆಗಳಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿತ್ತು’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.