ಬೆಂಗಳೂರು: ‘ಜಾತಿ ತಾರತಮ್ಯ, ಶೋಷಣೆ, ನಿಂದನೆ ಇಲ್ಲದೇ ಎಲ್ಲರಿಗೂ ಶಿಕ್ಷಣ, ಅವಕಾಶ ಸಿಗುವಂತೆ ರೋಹಿತ್ ಕಾಯ್ದೆ ರೂಪಿಸಬೇಕು' ಎಂದು ರೋಹಿತ್ ವೇಮುಲ ಅವರ ತಾಯಿ ರಾಧಿಕಾ ವೇಮುಲ ಭಾನುವಾರ ಇಲ್ಲಿ ಪ್ರತಿಪಾದಿಸಿದರು.
ಅವರು, ‘ರೋಹಿತ್ ಕಾಯ್ದೆಗೆ ಜನಾಂದೋಲನ’ ಏರ್ಪಡಿಸಿದ್ದ ‘ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ದಲಿತ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯಗಳು’ ಕುರಿತು ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
‘ಎಲ್ಲ ಮಕ್ಕಳು ನನಗೆ ರೋಹಿತ್ ತರಹ ಕಾಣುತ್ತಿದ್ದಾರೆ. ರೋಹಿತ್‌ಗೆ ಆದ ಅನ್ಯಾಯ ಯಾರಿಗೂ ಆಗಬಾರದು. ರೋಹಿತ್ ವೈದ್ಯನಾಗಬೇಕು ಎಂದು ಕನಸು ಕಂಡಿದ್ದ. ಪಿಎಚ್‌ಡಿ ಮಾಡು ಎಂದು ಹೇಳಿದ್ದೆ. ಆರ್ಥಿಕ ತೊಂದರೆಯಿಂದ ಕಾಲೇಜು ಅರ್ಧದಲ್ಲಿ ಬಿಟ್ಟು ಕೆಲಸ ಮಾಡುತ್ತಿದ್ದ. ಮತ್ತೆ ಓದು ಮುಂದುವರಿಸುವಂತೆ ಮಾಡಿದ್ದೆ. ಆದರೆ, ವಿಶ್ವವಿದ್ಯಾಲಯದೊಳಗಿನ ಜಾತಿ ವ್ಯವಸ್ಥೆ, ಎಬಿವಿಪಿಯಂಥ ಸಂಘಟನೆಗಳು ಅವನನ್ನು ಬಲಿ ತೆಗೆದುಕೊಂಡವು’ ಎಂದು ನೆನಪು ಮಾಡಿಕೊಂಡರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ‘ಜಾತಿ ತಾರತಮ್ಯ ಇರಬಾರದು ಎಂದು ನಾವು ಒಂದು ಕಡೆ ರೋಹಿತ್ ಕಾಯ್ದೆಗೆ ಒತ್ತಾಯಿಸುತ್ತಿದ್ದರೆ, ಇನ್ನೊಂದೆಡೆ ಕೆಲವರು ಸಮಾಜವನ್ನು ಹಿಂದಕ್ಕೆ ಒಯ್ಯುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಕೆಲವು ಪಕ್ಷಗಳು ಹೊರನೋಟಕ್ಕೆ ಭಾರಿ ಪ್ರಗತಿಪರವಾಗಿರುವಂತೆ ಕಂಡರೂ ಅದರೊಳಗಿದ್ದವರು ವ್ಯವಸ್ಥಿತವಾಗಿ ಬ್ರಾಹ್ಮಣ್ಯ, ಬಂಡವಾಳಶಾಹಿ ಜಾರಿಗೆ ತರುವವರೇ ಆಗಿದ್ದಾರೆ’ ಎಂದು ಟೀಕಿಸಿದರು.
ವಿಜ್ಞಾನ ಶಿಕ್ಷಕ ವಿಕಾಸ್ ಆರ್. ಮೌರ್ಯ ಅವರು, ‘ಎಸ್‌ಸಿ–ಎಸ್‌ಟಿ ವಿದ್ಯಾರ್ಥಿಗಳಲ್ಲಿ ಶೇ 72ರಷ್ಟು ಮಂದಿ ಜಾತಿ ತಾರತಮ್ಯ, ನಿಂದನೆ ಅನುಭವಿಸುತ್ತಿದ್ದಾರೆ. ರೋಹಿತ್ ವೇಮುಲರಂತೆ 122 ವಿದ್ಯಾರ್ಥಿಗಳು ಈ ರೀತಿ ಜೀವ ಕಳೆದುಕೊಂಡಿದ್ದಾರೆ’ ಎಂದರು.
ರೋಹಿತ್‌ನ ಸಹಪಾಠಿ ದೊಂತ ಪ್ರಶಾಂತ್, ‘ರೋಹಿತ್ ಕಾಯ್ದೆಗಾಗಿ ಜನಾಂದೋಲನ’ದ ಲೇಖಾ ಅವರು ಕಾಯ್ದೆಯ ಸ್ವರೂಪದ ಬಗ್ಗೆ ವಿವರಿಸಿದರು.
ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ವಿದ್ಯಾರ್ಥಿಯಾಗಿದ್ದ ರೋಹಿತ್ ಚಕ್ರವರ್ತಿ ವೇಮುಲ 2016ರಲ್ಲಿ ರೋಹಿತ್ ವೇಮುಲ ಆತ್ಮಹತ್ಯೆಗೆ ಶರಣಾಗಿದ್ದರು. ಎಬಿವಿಪಿ ಜೊತೆಗಿನ ತಿಕ್ಕಾಟ ಇದಕ್ಕೆ ಕಾರಣ ಎನ್ನಲಾಗಿದ್ದು, ಚರ್ಚೆಗೆ ಆಸ್ಪದವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.