ADVERTISEMENT

ದರೋಡೆ ಸಂಚು; ಮಾರಕಾಸ್ತ್ರ ಸಮೇತ ರೌಡಿ ಗ್ಯಾಂಗ್ ಸೆರೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 15:04 IST
Last Updated 24 ಫೆಬ್ರುವರಿ 2021, 15:04 IST
ಆರೋಪಿಗಳಿಂದ ಜಪ್ತಿ ಮಾಡಲಾದ ಮಾರಕಾಸ್ತ್ರಗಳು
ಆರೋಪಿಗಳಿಂದ ಜಪ್ತಿ ಮಾಡಲಾದ ಮಾರಕಾಸ್ತ್ರಗಳು   

ಬೆಂಗಳೂರು: ಮಾರತ್ತಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ದಾರಿಹೋಕರನ್ನು ಅಡ್ಡಗಟ್ಟಿ ದರೋಡೆ ಮಾಡಲು ಸಂಚು ರೂಪಿಸಿದ್ದ ನಾಲ್ವರು ರೌಡಿಗಳು ಸೇರಿದಂತೆ 11 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ನಗರದ ರೌಡಿಗಳಾದ ಎಚ್‌. ಹರೀಶ್ (27), ಪಿ. ವೆಂಕಟೇಶ್ (27), ಮಂಗಳೂರಿನ ರೌಡಿಗಳಾದ ಕಿರಣ್‌ ಗೌಡ (30), ವಿಶ್ವನಾಥ್ ಭಂಡಾರಿ (30) ಹಾಗೂ ಅವರ ಸಹಚರರಾದ ಎಸ್. ಸತೀಶ್, ಎಲ್. ಹೇಮಂತ್, ಟಿ. ಗಣೇಶ್, ಎನ್‌. ವಿನೋದ್, ಕಿರಣ್‌ ಕುಮಾರ್, ವಿ, ಅಣ್ಣಮಲೈ ಬಂಧಿತರು. ಅವರಿಂದ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ಎರಡು ಕಾರಿನಲ್ಲಿ ಮಾರಕಾಸ್ತ್ರಗಳನ್ನು ಇಟ್ಟುಕೊಂಡಿದ್ದ ಆರೋಪಿಗಳು, ಮಾರತ್ತಹಳ್ಳಿ ಬಳಿಯ ಹಾರಿಜನ್ ರಸ್ತೆಗೆ ಬಂದಿದ್ದರು. ರಸ್ತೆಯಲ್ಲಿ ಬರುವ ಕಾರುಗಳು ಹಾಗೂ ದಾರಿಹೋಕರನ್ನು ಅಡ್ಡಗಟ್ಟಿ ಸುಲಿಗೆ ಮಾಡುವುದು ಅವರ ಉದ್ದೇಶವಾಗಿತ್ತು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದೂ ತಿಳಿಸಿದರು.

ADVERTISEMENT

ಸೋಮನ ಹತ್ಯೆಗೆ ಸಂಚು: ‘ಕಾಡುಬೀಸನಹಳ್ಳಿಯ ಸೋಮ ಹಾಗೂ ಆತನ ಸಹಚರರನ್ನು ಹತ್ಯೆ ಮಾಡಲು ಆರೋಪಿಗಳು ಸಂಚು ರೂಪಿಸಿದ್ದರು. ದರೋಡೆ ನಂತರ ಸೋಮನ ಬಳಿ ಹೋಗಿ ಗಲಾಟೆ ಮಾಡಿ ಕೊಲೆ ಮಾಡಬೇಕೆಂದು ಆರೋಪಿಗಳು ಅಂದುಕೊಂಡಿದ್ದರು. ಅಷ್ಟರಲ್ಲೇ ನಮಗೆ ಸಿಕ್ಕಿಬಿದ್ದರು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.