ADVERTISEMENT

ರೌಡಿ ಕೊಂದಿದ್ದ ಆರೋಪಿ ಕಾಲಿಗೆ ಗುಂಡೇಟು

​ಪ್ರಜಾವಾಣಿ ವಾರ್ತೆ
Published 4 ಮೇ 2020, 13:47 IST
Last Updated 4 ಮೇ 2020, 13:47 IST
ಪೊಲೀಸರಿಂದ ಗುಂಡೇಟು ತಿಂದ ಆರೋಪಿ 
ಪೊಲೀಸರಿಂದ ಗುಂಡೇಟು ತಿಂದ ಆರೋಪಿ    

ಬೆಂಗಳೂರು: ಕೆ.ಜಿ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಬಿಜ್ಜು ಅಲಿಯಾಸ್ ಮಾಯಾ ದಿಲೀಪ್ ಎಂಬಾತನ ಕೊಲೆ ಪ್ರಕರಣದ ಆರೋಪಿ ಸಂಜಯ್ ಅಲಿಯಾಸ್ ಆ್ಯಂಡ್ರೂಸ್‌ನನ್ನು ಕಾಲಿಗೆ ಗುಂಡು ಹಾರಿಸಿ ಸೋಮವಾರ ಸೆರೆಹಿಡಿಯಲಾಗಿದೆ.

ಮೇ 2ರಂದು ಬಿಜ್ಜುನ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿತ್ತು. ಕೃತ್ಯ ಬಳಿಕ ಪರಾರಿಯಾಗಿದ್ದ ಆರೋಪಿ‌, ತಲೆಮರೆಸಿಕೊಂಡು ಓಡಾಡುತ್ತಿದ್ದ.

ಹಳೇ ವೈಷಮ್ಯದಿಂದಾಗಿ ಸಂಜಯ್ ಹಾಗೂ ಆತನ ಸಹಚರರೇ ಕೃತ್ಯ ಎಸಗಿದ್ದು ಪೊಲೀಸರ ತನಿಖೆಯಿಂದ ಗೊತ್ತಾಗಿತ್ತು. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು.

ADVERTISEMENT

‘ಕೆ.ಜಿ. ಹಳ್ಳಿ ಬಳಿಯ ಲಿಡ್ಕರ್ ಕಾಲೋನಿಯಲ್ಲಿ ಆರೋಪಿ ಸಂಜಯ್‌ ಅಡಗಿದ್ದ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಬೆಳಿಗ್ಗೆ 6 ಗಂಟೆ ಸುಮಾರಿಗೆ ಇನ್‌ಸ್ಪೆಕ್ಟರ್ ಅಜಯ್ ಸಾರಥಿ ನೇತೃತ್ವದ ತಂಡ ಸ್ಥಳಕ್ಕೆ ಹೋಗಿ ಆರೋಪಿಯನ್ನು ಬಂಧಿಸಲು ಮುಂದಾಗಿತ್ತು’ ಎಂದು ಪೂರ್ವ ವಿಭಾಗದ ಡಿಸಿಪಿ ಎಸ್‌.ಡಿ.ಶರಣಪ್ಪ ಹೇಳಿದರು.

‘ಪೊಲೀಸರ ಕಣ್ಣಿಗೆ ಖಾರದ ಪುಡಿ ಎರಚಿದ್ದ ಸಂಜಯ್, ಹೆಡ್‌ ಕಾನ್‌ಸ್ಟೆಬಲ್ ಶ್ರೀನಿವಾಸ್‌ಮೂರ್ತಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದ. ರಕ್ಷಣೆಗೆ ಹೋದ ಇನ್‌ಸ್ಪೆಕ್ಟರ್ ಗಾಳಿಯಲ್ಲಿ‌ ಗುಂಡು ಹಾರಿಸಿ ಶರಣಾಗುವಂತೆ ಕೋರಿದ್ದರು.’

‘ಅಷ್ಟಾದರೂ ಆರೋಪಿ ಪೊಲೀಸರ ಮೇಲೆ ಪುನಃ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ. ಅದೇ ವೇಳೆಯೇ ಇನ್‌ಸ್ಪೆಕ್ಟರ್ ಆತನ ಎಡಗಾಲಿಗೆ ಗುಂಡು ಹೊಡೆದು ಸೆರೆಹಿಡಿದಿದ್ದಾರೆ. ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ’ ಎಂದರು.

‘ಹೆಡ್‌ ಕಾನ್‌ಸ್ಟೆಬಲ್‌ ಅವರಿಗೆ ಚಿಕಿತ್ಸೆ ಕೊಡಿಸಲಾಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ’ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.