ADVERTISEMENT

ರೌಡಿ ಹತ್ಯೆ: ಶ್ವಾನದಳದಿಂದ ತಪಾಸಣೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 16:14 IST
Last Updated 13 ಸೆಪ್ಟೆಂಬರ್ 2021, 16:14 IST

ಬೆಂಗಳೂರು: ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆಯ (ಕೆಎಸ್‌ಎಫ್‌ಎ) ಕ್ರೀಡಾಂಗಣದಲ್ಲಿ ನಡೆದಿರುವ ರೌಡಿ ಅರವಿಂದ್ (27) ಹತ್ಯೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಅಶೋಕನಗರ ಪೊಲೀಸರು, ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕ್ರೀಡಾಂಗಣದ ಎದುರಿನಲ್ಲಿರುವ ಬಿಬಿಎಂಪಿ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಅರವಿಂದ್‌ ಮೇಲೆ ನಾಲ್ವರು ದುಷ್ಕರ್ಮಿಗಳು ದಾಳಿ ಮಾಡಿದ್ದರು. ತಪ್ಪಿಸಿಕೊಂಡಿದ್ದ ಅರವಿಂದ್, ಕೆಎಸ್‌ಎಫ್‌ಎ ಕ್ರೀಡಾಂಗಣದೊಳಗೆ ಹೋಗಿದ್ದ. ಬೆನ್ನಟ್ಟಿದ್ದ ದುಷ್ಕರ್ಮಿಗಳು, ಕ್ರೀಡಾಂಗಣದ ಕೊಠಡಿಯಲ್ಲೇ ಆತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದರು.

ಘಟನಾ ಸ್ಥಳದಲ್ಲಿ ಶ್ವಾನದಳ ಸಿಬ್ಬಂದಿ ಸೋಮವಾರ ತಪಾಸಣೆ ನಡೆಸಿದರು. ಮೈದಾನ ಹಾಗೂ ಕ್ರೀಡಾಂಗಣದ ಹಲವೆಡೆ ಶ್ವಾನ ಓಡಾಡಿತು. ಅದನ್ನು ಪೊಲೀಸರು ಚಿತ್ರೀಕರಿಸಿಕೊಂಡರು.

ADVERTISEMENT

‘ಹಳೇ ವೈಷಮ್ಯದಿಂದಾಗಿ ಕೊಲೆ ನಡೆದಿರುವ ಅನುಮಾನವಿದೆ. ಆದರೆ, ಆರೋಪಿಗಳು ಯಾರು ಎಂಬುದಕ್ಕೆ ನಿಖರ ಪುರಾವೆಗಳು ಸಿಕ್ಕಿಲ್ಲ. ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

‘ಘಟನಾ ಸ್ಥಳ ಹಾಗೂ ಸುತ್ತಮುತ್ತಲ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಸಂಗ್ರಹಿಸಲಾಗಿದೆ. ಆರೋಪಿಗಳು ಮಾರಕಾಸ್ತ್ರ ಹಿಡಿದು, ಅರವಿಂದ್‌ನನ್ನು ಬೆನ್ನಟ್ಟಿದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ, ಆರೋಪಿಗಳ ಮುಖ ಸ್ಪಷ್ಟವಾಗಿಲ್ಲ. ಅವರು ಯಾರು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.