ಬೆಂಗಳೂರು: ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದ ಮೊದಲನೇ ಆರೋಪಿ ಜಗದೀಶ್ ಅಲಿಯಾಸ್ ಜಗ್ಗನನ್ನು ತಿಂಗಳ ಬಳಿಕ ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಕೃತ್ಯ ಎಸಗಿದ ಬಳಿಕ ಜಗ್ಗ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ.
ಆರೋಪಿ ಸೆರೆಗೆ ಸಿಐಡಿ ಪೊಲೀಸರು ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದರು. ದೆಹಲಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ. ಸಿಐಡಿ ಎಸ್ಪಿ ವೆಂಕಟೇಶ್ ಅವರ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿತ್ತು.
ಜುಲೈ 15ರಂದು ಭಾರತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಕ್ಲು ಶಿವನ ಹತ್ಯೆಯಾದ ನಂತರ ಪ್ರಕರಣದ ಮೊದಲನೇ ಆರೋಪಿ ಜಗದೀಶ್ ತಲೆಮರೆಸಿಕೊಂಡಿದ್ದ. ಆತನ ಬಂಧನಕ್ಕೆ ವಿಶೇಷ ತಂಡಗಳನ್ನು ರಚಿಸಲಾಗಿತ್ತು. ವಿಶೇಷ ತಂಡಗಳು ತಮಿಳುನಾಡು, ಆಂಧ್ರಪ್ರದೇಶ, ಕೇರಳ ಸೇರಿದಂತೆ ಹಲವು ಕಡೆಗಳಲ್ಲಿ ಶೋಧ ನಡೆಸುತ್ತಿದ್ದರೂ ಆತನ ಸುಳಿವು ಸಿಕ್ಕಿರಲಿಲ್ಲ. ಜಗ್ಗ ಚೆನ್ನೈ ಮೂಲಕ ದುಬೈಗೆ ಪರಾರಿಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿತ್ತು.
ಆರೋಪಿಯು ದುಬೈ, ಮಲೇಷ್ಯಾ, ಶ್ರೀಲಂಕಾ, ಇಂಡೊನೇಷ್ಯಾ ಮತ್ತು ಥಾಯ್ಲೆಂಡ್‌ನಲ್ಲಿ ಸುತ್ತಾಟ ನಡೆಸಿದ್ದಾನೆ ಎಂಬುದು ಗೊತ್ತಾಗಿದೆ.
ಬಿಕ್ಲು ಶಿವು ಕೊಲೆ ಪ್ರಕರಣದ ಐದನೇ ಆರೋಪಿ, ಕೆಆರ್ ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರನ್ನು ಭಾರತಿನಗರ ಠಾಣೆಯ ಪೊಲೀಸರು ಎರಡು ಬಾರಿ ವಿಚಾರಣೆ ನಡೆಸಿದ್ದರು. ನಂತರ, ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರವು ಸಿಐಡಿಗೆ ವಹಿಸಿತ್ತು.
‘ಪ್ರಕರಣದ ಸಂಬಂಧ ಬೈರತಿ ಬಸವರಾಜ್ ಅವರ ವಿಚಾರಣೆಯನ್ನು ಈಗಾಗಲೇ ನಡೆಸಲಾಗಿದೆ. ಜಗ್ಗನ ಬಂಧನ ಹಿನ್ನೆಲೆಯಲ್ಲಿ ಮತ್ತೊಮ್ಮೆ ಶಾಸಕರಿಗೆ ನೋಟಿಸ್ ಜಾರಿ ವಿಚಾರಣೆ ನಡೆಸುವ ಸಾಧ್ಯತೆಯಿದೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಜುಲೈ 15ರಂದು ತಡರಾತ್ರಿ ಹಲಸೂರು ಕೆರೆ ಬಳಿ ರೌಡಿ ಶಿವಪ್ರಕಾಶ್ ಅವರ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದರು. ಕೊಲೆ ಪ್ರಕರಣದ ಸಂಬಂಧ 16 ಆರೋಪಿಗಳನ್ನು ಬಂಧಿಸಲಾಗಿತ್ತು.
ಬಿಕ್ಲು ಶಿವನ ಕೊಲೆಯಾದ ದಿನವೇ ಆರೋಪಿ ಜಗದೀಶ್ ನಗರವನ್ನು ಬಿಟ್ಟು ಪರಾರಿಯಾಗಿದ್ದ. ಆತನ ಚಲನವಲನ ಟೋಲ್‌ವೊಂದರಲ್ಲಿ ಅಳವಡಿಸಿದ್ದ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಈ ಪ್ರಕರಣದ ಆರೋಪಿಗಳಾದ ಕಿರಣ್, ಮದನ್, ಸ್ಯಾಮ್ಯುಯಲ್, ಪ್ರದೀಪ್, ವಿಮಲ್, ಅನಿಲ್, ಕೋಲಾರ ಜಿಲ್ಲೆ ಮಾಲೂರಿನ ಅವಿನಾಶ್ ದೀನಹಳ್ಳಿ, ಸುದರ್ಶನ್, ಮುರುಗೇಶ್ ಹಾಗೂ ನರಸಿಂಹ ಸೇರಿದಂತೆ 16 ಮಂದಿಯನ್ನು ಬಂಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.