ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಿಯಮಬಾಹಿರ ಚಟುವಟಿಕೆಗಳು ಮುಂದುವರಿದಿದ್ದು, ಕೈದಿಯೊಬ್ಬ ಜೈಲಿನ ಒಳಗೇ ಜನ್ಮದಿನ ಆಚರಿಸಿಕೊಂಡಿದ್ದಾನೆ. ಜನ್ಮದಿನದ ಅಂಗವಾಗಿ ಪಾರ್ಟಿ ನಡೆಸಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಪ್ರಕರಣವೊಂದರಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿರುವ ರೌಡಿ ಶೀಟರ್ ಸಹ ಕೈದಿಗಳ ಜತೆಗೆ ಪಾರ್ಟಿ ಮಾಡಿದ್ದಾನೆ. ಸೇಬಿನ ಹಾರ ಹಾಕಿ, ಕೇಕ್ ಕತ್ತರಿಸಿ ಜನ್ಮದಿನವನ್ನು ಆಚರಣೆ ಮಾಡಿಕೊಳ್ಳಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೊಗಳು ರೌಡಿ ಶೀಟರ್ ಸೀನ ಅಲಿಯಾಸ್ ಗುಬ್ಬಚ್ಚಿ ಎಂಬಾತನ ಜನ್ಮದಿನಾಚರಣೆಯದ್ದು ಎಂದು ಹೇಳಲಾಗಿದೆ.
ಮೊಬೈಲ್‌ನಲ್ಲಿ ವಿಡಿಯೊ, ಫೋಟೊ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಜೈಲಿನ ಒಳಗಿಂದಲೇ ವಿಡಿಯೊ ಹಾಗೂ ಫೋಟೊ ಪೋಸ್ಟ್ ಆಗಿದೆ ಎಂದು ಹೇಳಲಾಗಿದೆ.
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ನಟ ದರ್ಶನ್ ಅವರಿಗೆ ವಿಶೇಷ ಆತಿಥ್ಯ ನೀಡಿದ್ದ ಫೋಟೊವೊಂದು ಕಳೆದ ವರ್ಷ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಜೈಲಿನ ಬ್ಯಾರಕ್ ಎದುರು ದರ್ಶನ್, ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನ ಹಾಗೂ ದರ್ಶನ್ ವ್ಯವಸ್ಥಾಪಕ ನಾಗರಾಜ್ ಅವರು ಕಾಫಿ ಕಪ್ ಹಿಡಿದು, ಸಿಗರೇಟ್ ಸೇದುತ್ತಾ ಹರಟೆ ಹೊಡೆಯುತ್ತಿದ್ದ ಫೋಟೊವೊಂದು ಬಹಿರಂಗವಾಗಿತ್ತು. ಅದಾದ ಮೇಲೆ ಸಿಸಿಬಿ ಪೊಲೀಸರು ಜೈಲಿನ ಮೇಲೆ ದಾಳಿ ನಡೆಸಿದ್ದರು.
ವಿವಿಧ ಬ್ಯಾರಕ್‌ಗಳಲ್ಲಿ ತಂಬಾಕು ಉತ್ಪನ್ನಗಳಾದ ಚೈನಿ, ಸ್ವಾಗತ್ ಗೋಲ್ಡ್, ಗಾಂಜಾ ಸೇದಲು ಕೈದಿಗಳು ಬಳಸುತ್ತಿದ್ದ ಕೊಳವೆಗಳು, ಚಾಕು, ಟ್ರಿಮರ್, ಕತ್ತರಿ, ಮೊಬೈಲ್ ಚಾರ್ಜರ್, ಬೆಂಕಿ ಪೊಟ್ಟಣ, ಲೈಟರ್, ಪ್ಲೇ ಕಾರ್ಡ್ಸ್, ಪ್ಲೇ ಕಾರ್ಡ್‌ನ ಆಟದ ಬಳಿಕ ಸಂಖ್ಯೆ ಬರೆದುಕೊಳ್ಳಲು ಕೈದಿಗಳು ಉಪಯೋಗಿಸಿದ್ದ ಪುಸ್ತಕ, ಬಿಸಿ ನೀರು ಕಾಯಿಸುವ ಕಾಯಲ್, ಆಯುಧಗಳು, ಕಬ್ಬಿಣದ ರಾಡುಗಳು ಪತ್ತೆ ಆಗಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.