ADVERTISEMENT

ಆರ್‌.ಆರ್‌.ನಗರ ಚುನಾವಣೆ: ಬಿಜೆಪಿ ಟಿಕೆಟ್‌ ನಾಳೆ ಅಂತಿಮ?

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2020, 19:38 IST
Last Updated 6 ಅಕ್ಟೋಬರ್ 2020, 19:38 IST
   

ಬೆಂಗಳೂರು: ಆರ್‌.ಆರ್‌.ನಗರದಲ್ಲಿ ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ಈಗ ಅನರ್ಹರಾಗಿರುವ ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಮೇಲ್ಮನವಿ ತೀರ್ಪು ಬುಧವಾರ ಹೊರಬೀಳುವ ಸಾಧ್ಯತೆ ಇದೆ.

ಈ ತೀರ್ಪು ಪ್ರಕಟವಾದ ಬಳಿಕವೇ ಆರ್‌.ಆರ್‌.ನಗರ ಮತ್ತು ಶಿರಾ ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡುವ ಸಂಭವ ಇದೆ ಎಂದು ಮೂಲಗಳು ತಿಳಿಸಿವೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಬಿಜೆಪಿಯ ಪರಾಜಿತ ಅಭ್ಯರ್ಥಿ ತುಳಸಿ ಮುನಿರಾಜುಗೌಡ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

ADVERTISEMENT

ಬಿಹಾರ್‌ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವ ಕಾರಣ ಇಂದು ರಾತ್ರಿ ಮತ್ತು ಗುರುವಾರ ಸಂಸದೀಯ ಮಂಡಳಿ ಸಭೆ ಸೇರಲಿದೆ. ಗುರುವಾರದ (ಅ.8) ಸಭೆಯಲ್ಲಿ ಎರಡು ಕ್ಷೇತ್ರಗಳ ಟಿಕೆಟ್‌ ಅಂತಿಮಗೊಳಿಸುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಮುನಿರತ್ನ ಅವರಿಗೆ ಟಿಕೆಟ್‌ ನೀಡುವ ವಿಚಾರವನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ತಮ್ಮ ಸರ್ಕಾರ ರಚನೆಗೆ ಕಾರಣರಾದವರನ್ನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ ಎಂದು ಪದೇ ಪದೇ ಹೇಳಿದ್ದರು.

ಇದೇ 9 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಅ.16 ನಾಮಪತ್ರ ಸಲ್ಲಿಕೆಗೆ ಕೊನೇ ದಿನ. ನವೆಂಬರ್‌ 3 ರಂದು ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.