
ಕೆ.ಆರ್.ಪುರ: ಖಾಸಗಿ ಜಮೀನಿನಲ್ಲಿ ಕೊರೆದಿರುವ ಕೊಳವೆಬಾವಿಗೆ ಗ್ರಾಮ ಪಂಚಾಯಿತಿಯ ಆರ್.ಆರ್.ಸಂಖ್ಯೆಯಡಿ (ಮೀಟರ್) ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿರುವುದು ಸಾಬೀತಾದ ಕಾರಣ ಕಣ್ಣೂರು ಗ್ರಾಮ ಪಂಚಾಯಿತಿ ಸದಸ್ಯ ದೊಡ್ಡಣ್ಣ ಅವರ ಸದಸ್ಯತ್ವವನ್ನು ರದ್ದುಪಡಿಸಲಾಗಿದೆ.
‘ಹೊಸೂರುಬಂಡೆ ನಿವಾಸಿ ದೊಡ್ಡಣ್ಣ ಅವರು ತಮ್ಮ ಕೊಳವೆಬಾವಿಗೆ ಅನಧಿಕೃತವಾಗಿ ಗ್ರಾಮ ಪಂಚಾಯಿತಿಯ ಆರ್.ಆರ್. ಸಂಖ್ಯೆ 4667 ಬಳಸಿಕೊಂಡಿದ್ದಾರೆ. ಕೊಳವೆಬಾವಿ ನೀರನ್ನು ಟ್ರ್ಯಾಕ್ಟರ್ ಟ್ಯಾಂಕರ್ ಮೂಲಕ ಸರಬರಾಜು ಮಾಡಿ ಲಕ್ಷಾಂತರ ರೂಪಾಯಿ ಆದಾಯ ಗಳಿಸಿದ್ದಾರೆ’ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಸದಸ್ಯ ಎಸ್.ಜೆ.ಮಧು ಅವರು 2021ರಲ್ಲಿ ದೂರು ನೀಡಿದ್ದರು.
ಎಸಿಬಿ ತನಿಖೆ ನಡೆಸಿದ ವೇಳೆ ಅಕ್ರಮವಾಗಿ ಆರ್.ಆರ್.ಸಂಖ್ಯೆಯನ್ನು ಸ್ವಂತಕ್ಕೆ ಬಳಸಿಕೊಂಡಿದ್ದು, ಇದರಿಂದಾಗಿ ಗ್ರಾಮ ಪಂಚಾಯಿತಿಗೆ ಲಕ್ಷಾಂತರ ರೂಪಾಯಿ ವಿದ್ಯುತ್ ಬಿಲ್ ನಷ್ಟ ಉಂಟಾಗಿರುವುದು ಗೊತ್ತಾಗಿತ್ತು. ಹೀಗಾಗಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43-A ಅನ್ವಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ ಡಿ.ರಂದೀಪ್ ಅವರು ಸದಸ್ಯತ್ವದಿಂದ ತೆಗೆದು ಹಾಕಿ ಆರು ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ಆದೇಶಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.