ADVERTISEMENT

₹8 ಕೋಟಿ ಆಸ್ತಿ ಜಗಳ ಜೋಡಿ ಕೊಲೆಗೆ ಕಾರಣ: ಪೊಲೀಸ್ ತನಿಖೆಯಿಂದ ಬಯಲು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2024, 23:53 IST
Last Updated 8 ಫೆಬ್ರುವರಿ 2024, 23:53 IST
ಕುಂಬಾರಪೇಟೆ ಅನ್ನದಾನ ಸಮಿತಿ ಟ್ರಸ್ಟ್ ಕಚೇರಿ
ಕುಂಬಾರಪೇಟೆ ಅನ್ನದಾನ ಸಮಿತಿ ಟ್ರಸ್ಟ್ ಕಚೇರಿ   

ಬೆಂಗಳೂರು: ಕುಂಬಾರಪೇಟೆ ಮುಖ್ಯರಸ್ತೆಯಲ್ಲಿ ನಡೆದಿರುವ ಬಿ.ಎಲ್. ಸುರೇಶ್ (55) ಹಾಗೂ ಮಹೇಂದ್ರ (68) ಜೋಡಿ ಕೊಲೆಗೆ ಕುಂಬಾರಪೇಟೆಯ ಎರಡು ಟ್ರಸ್ಟ್‌ಗಳ ಆಸ್ತಿ ಜಗಳ ಕಾರಣ ಎನ್ನುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

‘ಕುಂಬಾರಪೇಟೆ ಅನ್ನದಾನ ಸಮಿತಿ ಟ್ರಸ್ಟ್ ಹಾಗೂ ಕುಂಬಾರಪೇಟೆ ಆಂಜನೇಯ ಸ್ವಾಮಿ ದೇವಸ್ಥಾನ ಕಟ್ಟಡ ಸಮಿತಿ ಟ್ರಸ್ಟ್‌ ಒಡೆತನದಲ್ಲಿ ಸುಮಾರು ₹ 8 ಕೋಟಿ ಮೌಲ್ಯದ ವಾಣಿಜ್ಯ ಸಂಕೀರ್ಣವಿದೆ. ಇದರಲ್ಲಿರುವ ಮಳಿಗೆಗಳಿಂದ ಪ್ರತಿ ತಿಂಗಳು ಸುಮಾರು ₹ 10 ಲಕ್ಷ ಬಾಡಿಗೆ ಬರುತ್ತದೆ. ಇದೇ ಆಸ್ತಿ ವಿಚಾರವಾಗಿ ಹಲವು ವರ್ಷಗಳಿಂದ ನಡೆಯುತ್ತಿದ್ದ ಜಗಳವೇ ಜೋಡಿ ಕೊಲೆಗೆ ಕಾರಣ ಎನ್ನುವುದು ಪುರಾವೆಗಳಿಂದ ತಿಳಿದುಬಂದಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕೃತ್ಯಕ್ಕೆ ಸಂಬಂಧಪಟ್ಟಂತೆ ಪ್ರತ್ಯಕ್ಷದರ್ಶಿಗಳು, ಟ್ರಸ್ಟ್ ಪದಾಧಿಕಾರಿಗಳು ಹಾಗೂ ಇತರರ ಹೇಳಿಕೆ ಪಡೆಯಲಾಗುತ್ತಿದೆ. ಎಲ್ಲರ ಹೇಳಿಕೆ ಪರಿಶೀಲಿಸಿ ಸೂಕ್ತ ಪುರಾವೆಗಳನ್ನು ಸಂಗ್ರಹಿಸಿ ದೋಷಾರೋಪ ಪಟ್ಟಿ ಸಿದ್ಧಪಡಿಸಲಾಗುವುದು’ ಎಂದು ತಿಳಿಸಿವೆ.

ADVERTISEMENT

ಆಸ್ತಿ ದುರುಪಯೋಗ ಆರೋಪ: ‘ಪದ್ಮನಾಭನಗರದ ನಿವಾಸಿ ಸುರೇಶ್ ಅವರು ಟ್ರಸ್ಟ್‌ನ ಪದಾಧಿಕಾರಿಯಾಗಿದ್ದರು. ಅವರ ತಂದೆ ಈ ಹಿಂದೆ ಟ್ರಸ್ಟ್ ಅಧ್ಯಕ್ಷರಾಗಿದ್ದರು. ವಾಣಿಜ್ಯ ಸಂಕೀರ್ಣದಲ್ಲಿರುವ ಮಳಿಗೆಯೊಂದನ್ನು ಸುರೇಶ್ ತಮ್ಮ ಹೆಸರಿಗೆ ಪಡೆದುಕೊಂಡಿದ್ದರು. ಜೊತೆಗೆ, ಟ್ರಸ್ಟ್‌ಗೆ ಸಂಬಂಧಪಟ್ಟ ಆಸ್ತಿಯನ್ನೆಲ್ಲ ದುರುಪಯೋಗಪಡಿಸಿಕೊಂಡಿದ್ದ ಆರೋಪ ಅವರ ಮೇಲಿತ್ತು’ ಎಂದು ಮೂಲಗಳು ಹೇಳಿವೆ.

‘ಟ್ರಸ್ಟ್‌ನ ಸಂಸ್ಥಾಪಕರ ಕುಟುಂಬದ ಸದಸ್ಯನಾಗಿದ್ದ ಆರೋಪಿ ಭದ್ರ, ಟ್ರಸ್ಟ್ ಆಸ್ತಿ ಹಾಗೂ ಕೌಟುಂಬಿಕ ಕಾರಣಕ್ಕೆ ಸುರೇಶ್ ಜೊತೆಗೆ ಮೈಮನಸ್ಸು ಹೊಂದಿದ್ದ. ಇದೇ ಸಿಟ್ಟಿನಲ್ಲಿ ಬುಧವಾರ (ಫೆ. 7) ರಾತ್ರಿ 8.30ರ ಸುಮಾರಿಗೆ ಮಳಿಗೆಗೆ ನುಗ್ಗಿ ಸುರೇಶ್ ಅವರನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ಸ್ನೇಹಿತ ಸುರೇಶ್‌ ಅವರನ್ನು ಮಾತನಾಡಿಸಲು ಬಂದಿದ್ದ ಮಹೇಂದ್ರ ಅವರನ್ನೂ ಆರೋಪಿ ಹತ್ಯೆ ಮಾಡಿದ್ದಾನೆ’ ಎಂದು ಮೂಲಗಳು ವಿವರಿಸಿವೆ.

ಉಪ ಬಾಡಿಗೆ ನೀಡಿದ್ದ ಸುರೇಶ್: ‘ವಾಣಿಜ್ಯ ಸಂಕೀರ್ಣದ ಮಳಿಗೆಯೊಂದನ್ನು ಸುರೇಶ್ ಅವರು ಬೇರೊಬ್ಬರಿಗೆ ಉಪ ಬಾಡಿಗೆಗೆ ನೀಡಿದ್ದರು. ಇದರ ವಿರುದ್ಧ ಟ್ರಸ್ಟ್‌ನ ಕೆಲವರಿಗೆ ಹಾಗೂ ಭದ್ರನಿಗೆ ಅಸಮಾಧಾನವಿತ್ತು. ತಮ್ಮ ಹಿರಿಯರು ಸ್ಥಾಪಿಸಿರುವ ಟ್ರಸ್ಟ್‌ನ ಲಾಭವನ್ನು ಸುರೇಶ್ ಮಾತ್ರ ಪಡೆಯುತ್ತಿದ್ದಾನೆಂಬ ಕೋಪ ಭದ್ರನಲ್ಲಿ  ಮಡುಗಟ್ಟಿತ್ತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ದೂರವಾಗಿದ್ದ ಪತ್ನಿ: ‘ಆರೋಪಿ ಭದ್ರನ ಪತ್ನಿ ಆತನಿಂದ ದೂರವಾಗಲು ಸುರೇಶ್‌ ಕಾರಣ ಎನ್ನಲಾಗಿದೆ. ಮಳಿಗೆಯೊಂದನ್ನು ಬಾಡಿಗೆಗೆ ನೀಡಿದ್ದರಿಂದ ಬಂದಿದ್ದ ಹಣದಲ್ಲಿ ಭದ್ರನ ಪತ್ನಿಗೂ ಪಾಲು ಕೊಟ್ಟಿದ್ದ ಸುರೇಶ್, ಪ್ರತ್ಯೇಕವಾಗಿ ವಾಸಿಸಲು ವ್ಯವಸ್ಥೆ ಮಾಡಿಕೊಟ್ಟಿದ್ದ. ಈ ಸಂಗತಿ ಭದ್ರನಿಗೆ ಗೊತ್ತಾಗಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಟ್ರಸ್ಟ್ ಆಸ್ತಿ ವಿಚಾರವಾಗಿ ನ್ಯಾಯಾಲಯದಲ್ಲಿ ವ್ಯಾಜ್ಯವಿತ್ತು. ಈ ಪ್ರಕರಣದಲ್ಲಿ ಭದ್ರ ಹಾಗೂ ಇತರರಿಗೆ ಹಿನ್ನೆಡೆ ಆಗಿತ್ತು. ಜೊತೆಗೆ, ಟ್ರಸ್ಟ್ ಆಸ್ತಿಯೆಲ್ಲವೂ ತನ್ನದೆಂದು ಸುರೇಶ್ ಹೇಳಿಕೊಂಡು ಓಡಾಡುತ್ತಿದ್ದರು. ‘ಆಸ್ತಿಯನ್ನೂ ಅನುಭವಿಸುತ್ತಿದ್ದಾನೆ. ನನ್ನ ಪತ್ನಿಯನ್ನೂ ದೂರ ಮಾಡಿದ್ದಾನೆ’ ಎಂದು ಕೋಪಗೊಂಡಿದ್ದ ಭದ್ರ, ಸುರೇಶ್‌ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದ’ ಎಂದು ಮೂಲಗಳು ತಿಳಿಸಿವೆ.

ಎಸಿಪಿಗೆ ದೂರು ನೀಡಿದ್ದ ಎದುರಾಳಿ ಗುಂಪು: ‘ಬಿ.ಎಲ್. ಸುರೇಶ್ ಟ್ರಸ್ಟ್ ಆಸ್ತಿ ದುರುಪಯೋಗಪಡಿಸಿಕೊಳ್ಳುತ್ತಾರೆ’ ಎಂದು ಆರೋಪಿಸಿ ಎದುರಾಳಿ ಗುಂಪಿನವರು, ಹಲಸೂರು ಗೇಟ್ ಎಸಿಪಿ ಅವರಿಗೆ 2023ರ ಏಪ್ರಿಲ್ 24ರಂದು ದೂರು ನೀಡಿದ್ದರು.

‘ಬಾಡಿಗೆದಾರರನ್ನು ಬೆದರಿಸಿ ಬಾಡಿಗೆ ವಸೂಲಿ ಮಾಡಿದ್ದಾರೆ. ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ಟ್ರಸ್ಟ್ ಆಸ್ತಿಯನ್ನು ಬಿ.ಎಲ್‌. ಸುರೇಶ್ ಹಾಗೂ ಕುಟುಂಬದವರು ಅಕ್ರಮವಾಗಿ ತಮ್ಮದಾಗಿಸಿಕೊಂಡಿದ್ದಾರೆ. ಬಾಡಿಗೆ ಹಾಗೂ ಆಸ್ತಿಯ ಇತರೆ ಹಣವನ್ನು ತಮ್ಮ ವೈಯಕ್ತಿಕ ಖಾತೆಗೆ ಹಾಕಿಸಿಕೊಂಡು ಅಕ್ರಮ ಎಸಗಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಿದ್ದರು.

ಆಸ್ತಿಗೆ ಸಂಬಂಧಪಟ್ಟಂತೆ ಟ್ರಸ್ಟ್ ಕಚೇರಿಯಲ್ಲಿಯೇ 2023ರಲ್ಲಿ ಎರಡು ಬಣಗಳ ನಡುವೆ ಮಾರಾಮಾರಿ ನಡೆದಿತ್ತು. ಈ ಪ್ರಕರಣವೂ ಠಾಣೆಗೆ ಮೆಟ್ಟಿಲೇರಿತ್ತು. ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದ ಆರೋಪದಡಿ ಬಿ.ಎಲ್. ಸುರೇಶ್‌ ವಿರುದ್ಧವೂ ಕೆ.ಆರ್. ಮಾರುಕಟ್ಟೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

‘ಮಾತನಾಡಿಸಲು ಬಂದು ಕೊಲೆಯಾದರು’
‘ಸುರೇಶ್ ಹಾಗೂ ಮಹೇಂದ್ರ ಹಲವು ವರ್ಷಗಳ ಸ್ನೇಹಿತರು. ಬುಧವಾರ ಸಂಜೆ ಮಾರುಕಟ್ಟೆಗೆ ಬಂದಿದ್ದ ಮಹೇಂದ್ರ ಸ್ನೇಹಿತ ಸುರೇಶ್‌ ಅವರ ಕುಶಲೋಪರಿ ವಿಚಾರಿಸಲು ಮಳಿಗೆಗೆ ಬಂದಿದ್ದರು. ಇಬ್ಬರೂ ಪರಸ್ಪರ ಮಾತನಾಡುತ್ತ ಕುಳಿತಿದ್ದಾಗಲೇ ಆರೋಪಿ ಭದ್ರ ದಾಳಿ ಮಾಡಿದ್ದ. ಆರಂಭದಲ್ಲಿ ಸುರೇಶ್‌ ಅವರನ್ನು ಚಾಕುವಿನಿಂದ ಇರಿದು ಕೊಂದಿದ್ದ. ಮಹೇಂದ್ರ ರಕ್ಷಣೆಗೆ ಹೋಗಿದ್ದರು. ಅವರ ಮೇಲೆಯೂ ದಾಳಿ ಮಾಡಿದ್ದ ಭದ್ರ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.