ಬೆಂಗಳೂರು: ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ಹಮ್ಮಿ ಕೊಂಡಿರುವುದನ್ನು ‘ಜಾಗೃತ ನಾಗರಿಕರು, ಕರ್ನಾಟಕ’ ಸಂಘಟನೆ ಖಂಡಿಸಿದೆ.
‘ಕೇಂದ್ರೀಯ ವಿಶ್ವವಿದ್ಯಾಲಯವನ್ನು ಕೋಮುವಾದದ ಆಡುಂಬೊಲ ಮಾಡಲು ಹೊರಟಿರುವ ಅಲ್ಲಿನ ಆಡಳಿತ ಮಂಡಳಿಯ ಈ ಕುಕೃತ್ಯ ಶೈಕ್ಷಣಿಕ ವಲಯದ ಮಹಾ ದುರಂತ’ ಎಂದು ‘ಜಾಗೃತ ನಾಗರಿಕರು, ಕರ್ನಾಟಕ’ದ ಕೆ. ಮರುಳಸಿದ್ದಪ್ಪ, ಜಿ. ರಾಮಕೃಷ್ಣ, ಎಸ್.ಜಿ. ಸಿದ್ದರಾಮಯ್ಯ, ವಿಜಯಾ, ಬಿ.ಶ್ರೀಪಾದ ಭಟ್, ಕೆ.ಎಸ್. ವಿಮಲಾ, ಟಿ. ಸುರೇಂದ್ರ ರಾವ್, ಮೀನಾಕ್ಷಿ ಬಾಳಿ, ಬಿ.ಎನ್. ಯೋಗಾನಂದ, ಎನ್. ಗಾಯತ್ರಿ ಬೇಸರ ವ್ಯಕ್ತಪಡಿಸಿದ್ದಾರೆ.
‘ಈ ವಿಶ್ವವಿದ್ಯಾಲಯದಲ್ಲಿ ಪ್ರಾರಂಭದಿಂದಲೂ ಆರ್‌ಎಸ್‌ಎಸ್ ಅಕ್ರಮ ಚಟುವಟಿಕೆ ನಡೆಸುತ್ತಿರುವುದು ವರದಿಯಾಗುತ್ತಲೇ ಇದೆ. ಇದನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಆದರೆ, ಆಡಳಿತ ಮಂಡಳಿಯು ಸಂಘದ ಭಾಗವೆಂಬಂತೆ ವರ್ತಿಸುತ್ತಿದೆ’ ಎಂದು ಆರೋಪಿಸಿದ್ದಾರೆ.
ವಿಶ್ವವಿದ್ಯಾಲಯದಲ್ಲಿ ಆರ್‌ಎಸ್‌ಎಸ್ ಸಭೆ, ಚಟುವಟಿಕೆ ನಡೆಸುವುದು, ಸಂಘದ ಗೀತೆ ಹಾಡಿಸುವುದು ದೇಶದ ಸಂವಿಧಾನಕ್ಕೆ ಮಾಡುತ್ತಿರುವ ಅಪಚಾರ. ಉನ್ನತ ಮಟ್ಟದ ಶೈಕ್ಷಣಿಕ ಚಟುವಟಿಕೆ, ಜನೋಪಯೋಗಿ ಸಂಶೋಧನೆಗಳು, ವರ್ತಮಾನದ ತಲ್ಲಣಗಳ ಕುರಿತು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ವಿಚಾರಸಂಕಿರಣ, ಚಿಂತನ-ಮಂಥನ ಗಳನ್ನು ನಡೆಸಿದರೆ ವಿದ್ಯಾರ್ಥಿಗಳ ಬೆಳವಣಿಗೆಯಾಗುತ್ತದೆ. ಆದರೆ ಇಲ್ಲಿ ಸಂಕುಚಿತ ಮನಃಸ್ಥಿತಿಯನ್ನು ಮೂಡಿಸುವ, ಧರ್ಮದ್ವೇಷ, ಹಗೆತನ, ದೇಶದ ಸಂವಿಧಾನ ಎಂದಿಗೂ ಒಪ್ಪಲಾರದ ಕೋಮುದ್ವೇಷಗಳನ್ನು ತುಂಬುವ ಆರ್‌ಎಸ್ಎಸ್ ಪ್ರತಿ ಪಾದಿಸುವ ದೇಶ ವಿಭಜಕ ವಿಧ್ವಂಸಕ ಕೃತ್ಯ ನಡೆಯುತ್ತಿದೆ ಎಂದು ದೂರಿದ್ದಾರೆ.
‘ಕೇಂದ್ರೀಯ ವಿಶ್ವವಿದ್ಯಾಲಯ ದೇಶದ ಆಸ್ತಿಯೇ ಹೊರತು ಯಾವುದೇ ಒಂದು ಪಕ್ಷದ ಅಥವಾ ಕೋಮುವಾದಿ ಸಿದ್ಧಾಂತವನ್ನು ಪ್ರತಿಪಾದಿಸುವ ಸಂಘಿಗಳ ಆಸ್ತಿಯಲ್ಲ. ದೇಶದ ಸಂವಿಧಾನದ ಅಡಿ ಕೆಲಸ ನಿರ್ವಹಿಸಬೇಕೇ ಹೊರತು ಕೇಶವ ಕೃಪಾ ಅಥವಾ ನಾಗಪುರದ ಕಚೇರಿಯಾಗಿ ಅಲ್ಲ. ಇದರ ವಿರುದ್ಧ ಕಲಬುರಗಿಯ ಪ್ರಜ್ಞಾವಂತರು ನಡೆಸುವ ಸಂವಿಧಾನ ಪರ, ನಿಜ ಭಾರತದ ಉಳಿವಿನ ಪರವಾದ ಎಲ್ಲ ಕೆಲಸ, ಪ್ರತಿಭಟನೆಗಳಿಗೆ ಬೆಂಬಲಿಸುತ್ತೇವೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.