ADVERTISEMENT

ಆರ್‌ಎಸ್‌ಎಸ್‌ಗೆ ವಿದೇಶಿ ದೇಣಿಗೆ: ತನಿಖೆಗೆ ಕೆ.ಎಂ.ರಾಮಚಂದ್ರಪ್ಪ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 15:36 IST
Last Updated 25 ಅಕ್ಟೋಬರ್ 2025, 15:36 IST
   

ಬೆಂಗಳೂರು: ‘ನೂರು ವರ್ಷಗಳನ್ನು ಪೂರೈಸಿರುವ ಆರ್‌ಎಸ್‌ಎಸ್‌ಗೆ ಬರುವ ವಿದೇಶಿ ದೇಣಿಗೆ, ಗುಪ್ತ ನಿಧಿಗಳ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ತನಿಖೆ ನಡೆಸಬೇಕು’ ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ.ರಾಮಚಂದ್ರಪ್ಪ ಆಗ್ರಹಿಸಿದರು.

‘ಯಾವುದೇ ಸಂಘಟನೆಗಳು ಪ್ರತಿಭಟನೆ, ಹೋರಾಟ, ಮೆರವಣಿಗೆ, ಪಥಸಂಚಲನ, ಕಾರ್ಯಕ್ರಮ, ಪ್ರಾರ್ಥನೆಗಳನ್ನು ಶಾಲೆಗಳು, ರಸ್ತೆಗಳು, ಸರ್ಕಾರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಾಡಬೇಕಾಗಿದ್ದಲ್ಲಿ ಸಂವಿಧಾನ ಬದ್ಧವಾಗಿ ನೋಂದಣಿ ಆಗಿರಬೇಕು ಅಥವಾ ಸರ್ಕಾರದ ಅನುಮತಿ ಪಡೆದುಕೊಳ್ಳಬೇಕು. ಸಂಘಟನೆಗಳ ಮುಖ್ಯಸ್ಥರ ವಿವರ, ಕಾರ್ಯಕ್ರಮದ ಉದ್ದೇಶದ ಸ್ಪಷ್ಟತೆಗಳನ್ನು ಕಡ್ಡಾಯಗೊಳಿಸಿ ಕಾನೂನು ರಚಿಸಬೇಕು’ ಎಂದು ಸುದ್ದಿಗೋಷ್ಠಿಯಲ್ಲಿ ಸರ್ಕಾರವನ್ನು ಒತ್ತಾಯಿಸಿದರು.

‘ಮುಂದಿನ ದಿನಗಳಲ್ಲಿ ನಾವೂ ಜಿಲ್ಲೆ ಮತ್ತು ಗ್ರಾಮಗಳಲ್ಲಿ ಪಥಸಂಚಲನ ಮಾಡುತ್ತೇವೆ. ಆರ್‌ಎಸ್‌ಎಸ್‌ನವರು ದೊಣ್ಣೆ ಹಿಡಿದುಕೊಂಡಿರುತ್ತಾರೆ. ಶಕ್ತಿ ದೇವತೆಗಳನ್ನು ಪೂಜಿಸುವ ಶೂದ್ರರು ಏನು ಹಿಡಿದುಕೊಳ್ಳಬೇಕು ಎಂಬುದನ್ನು ತೋರಿಸುತ್ತೇವೆ. ನಾವು ಸಭೆ, ಮೆರವಣಿಗೆ, ಪ್ರತಿಭಟನೆ ಮಾಡಿದರೆ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸುತ್ತಾರೆ. ಆದರೆ, ಆರ್‌ಎಸ್‌ಎಸ್‌ಗೆ ಯಾವುದೇ ಅಡಚಣೆ ಇಲ್ಲದೇ ಪಥಸಂಚಲನಕ್ಕೆ ಅವಕಾಶ ಕೊಡಲಾಗುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಮಾವಳ್ಳಿ ಶಂಕರ್ ಮಾತನಾಡಿ, ‘ಆರ್‌ಎಸ್ಎಸ್‌ ನೋಂದಣಿಯಾಗಿದೆಯಾ? ಅದಕ್ಕೆ ಬರುವ ಆದಾಯದ ಮೂಲದ ಬಗ್ಗೆ ಕೆಲವು ಪ್ರಶ್ನೆಗಳನ್ನು ಎತ್ತಿದ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನೇ ಖಳನಾಯಕ ಎಂಬಂತೆ ಬಿಂಬಿಸಲಾಗುತ್ತಿದೆ. ಅವರು ಕೇಳಿರುವುದರಲ್ಲಿ ಏನು ತಪ್ಪಿದೆ? ಆರ್‌ಎಸ್‌ಎಸ್ ಯಾವುದೇ ಕಾರ್ಯಕ್ರಮ ಮಾಡಿದರೂ ಕಾನೂನು ಬದ್ಧವಾಗಿ ಮಾಡಬೇಕು ಎಂಬುದು ನಮ್ಮ ಆಶಯ’ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಒಕ್ಕೂಟದ ಸಂಚಾಲಕ ಎಣ್ಣೆಗೆರೆ ಆರ್.ವೆಂಕಟರಾಮಯ್ಯ, ಅನಂತನಾಯ್ಕ್, ಸಂಚಾಲನ ಸಮಿತಿ ಸದಸ್ಯ ಜಿ.ಡಿ.ಗೋಪಾಲ್, ಕೆ.ವೆಂಕಟಸುಬ್ಬರಾಜು, ದಲಿತ ಕ್ರಿಶ್ಚಿಯನ್ ಫೆಡರೇಷನ್ ಅಧ್ಯಕ್ಷ ಮನೋಹರ್‌ ಚಂದ್ರ ಪ್ರಸಾದ್, ಮಡಿವಾಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿ.ನಂಜಪ್ಪ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.