ADVERTISEMENT

ಪರಸ್ಪರ ಆರೋಪ ಮಾಡುವ ಕಾಲ ಇದಲ್ಲ: ಮೋಹನ್ ಭಾಗವತ್

​ಪ್ರಜಾವಾಣಿ ವಾರ್ತೆ
Published 15 ಮೇ 2021, 19:31 IST
Last Updated 15 ಮೇ 2021, 19:31 IST
ಮೋಹನ್ ಭಾಗವತ್
ಮೋಹನ್ ಭಾಗವತ್   

ಬೆಂಗಳೂರು: ‘ಕೋವಿಡ್‌ ವಿರುದ್ಧದ ಹೋರಾಟದ ಸಂದರ್ಭದಲ್ಲಿ ಸರಿ– ತಪ್ಪುಗಳ ಬಗ್ಗೆ ಪರಸ್ಪರ ಆರೋಪ, ವಿಮರ್ಶೆ ಮಾಡುತ್ತಾ ಕೂರುವ ಸಮಯ ಇದಲ್ಲ. ಒಗ್ಗಟ್ಟಿನಿಂದ ಹೋರಾಟ ನಡೆಸುವುದು ಇಂದಿನ ಅಗತ್ಯ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಹೇಳಿದರು.

ಪಾಸಿಟಿವಿಟಿ ಅನ್ಲಿಮಿಟೆಡ್ ಉಪನ್ಯಾಸ ಮಾಲಿಕೆಯ ಐದನೇ ಹಾಗೂ ಕಡೆಯ ದಿನದಲ್ಲಿ ಅವರು ಮಾತನಾಡಿದರು.

‘ಉದ್ಯಮಿಗಳು, ವೈದ್ಯರು, ಎಲ್ಲ ಪಕ್ಷಗಳ ಜನಪ್ರತಿನಿಧಿಗಳು ತಂಡವಾಗಿ ಪುಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂತಹ ಪ್ರಯತ್ನಗಳು ಎಲ್ಲೆಡೆ ನಡೆಯಬೇಕು’ ಎಂದರು.

ADVERTISEMENT

‘ಅನೇಕರು ತಮ್ಮವರನ್ನು ಕಳೆದುಕೊಂಡು ನೋವಿನಲ್ಲಿದ್ದಾರೆ. ದುಡಿಯುವ ಕೈಗಳಿಗೆ ಕೆಲಸ ಇಲ್ಲವಾಗಿದೆ. ಅಂತವರಿಗೆ ಸಾಂತ್ವಾನ ಹೇಳುವುದು ಮತ್ತು ಪರಸ್ಪರ ನೆರವಾಗುವುದು ನಮ್ಮೆಲ್ಲರ ಕರ್ತವ್ಯ. ಕೋವಿಡ್ ದೊಡ್ಡ ಸವಾಲು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಮಾನಸಿಕವಾಗಿ ದುರ್ಬಲರಾಗಬಾರದು. ನಿರಾಶಾದಾಯಕ ಪರಿಸ್ಥಿತಿ ಸದ್ಯ ನಮ್ಮ ಮುಂದಿಲ್ಲ’ ಎಂದರು.

‘ಭಾರತೀಯರಾದ ನಮಗೆ ಜನನ, ಮರಣ, ಪುನರ್ಜನ್ಮಗಳು ಸಹಜ. ಎಲ್ಲರೂ ಒಂದು ದಿನ ಹೋಗುವವರೇ. ಹಾಗಾಗಿ, ನಮ್ಮವರನ್ನು ಕಳೆದುಕೊಂಡೆವು ಎಂಬ ನಿರಾಶೆ ಬೇಡ. ‌ಸಮುದ್ರಮಥನ ಮಾಡುವಾಗ ಅನೇಕ ರತ್ನಗಳು ಸಿಕ್ಕಿದವು ಎಂದು ತೃಪ್ತರಾಗಿ ಮಥನವನ್ನು ನಿಲ್ಲಿಸಲಿಲ್ಲ. ವಿಷಕ್ಕೆ ಹೆದರಲೂ ಇಲ್ಲ. ಅಮೃತ ಬರುವವರೆಗೆ ಮಥನವನ್ನು ಮುಂದುವರಿಸಿದರು. ಕೊನೆಗೂ ದೇವತೆಗಳಿಗೆ ಅಮೃತ ಸಿಕ್ಕಿತು. ಹಾಗೆಯೇ, ಧೈರ್ಯಶಾಲಿಗಳಿಗೆ ಗೆಲುವು ಸಿಗುವವರೆಗೆ ವಿಶ್ರಾಂತಿಯಿಲ್ಲ’ ಎಂದು ಹೇಳಿದರು.

‘ಆರೋಗ್ಯಕರ ಆಹಾರವನ್ನು ಸೇವಿಸೋಣ. ವೈಜ್ಞಾನಿಕ ಆಲೋಚನೆಯ ಅಗತ್ಯವೂ ಇಂದು ಇದೆ. ಹಳೆಯದೆಲ್ಲ ಒಳ್ಳೆಯದು, ಹೊಸದೆಲ್ಲ ಕೆಟ್ಟದ್ದು ಎಂಬುದೂ ಸರಿಯಲ್ಲ. ಹಾಗೆಂದ ಮಾತ್ರಕ್ಕೆ ಹೊಸದನ್ನು ಸ್ವೀಕರಿಸುತ್ತಾ, ಹಳೆಯದನ್ನು ತ್ಯಜಿಸುವುದೂ ಸರಿಯಲ್ಲ. ಇವತ್ತಿನ ಸಂದರ್ಭಕ್ಕೆ ಯಾವುದು ಸೂಕ್ತ ಎಂದು ಯೋಚಿಸಿ ಅಂತಹದ್ದನ್ನು ಸ್ವೀಕರಿಸುವ ವಿವೇಕ ನಮ್ಮಲ್ಲಿರಬೇಕು’ ಎಂದರು.

‘ಮಕ್ಕಳ ಶಿಕ್ಷಣ ಈ ವರ್ಷವೂ ಸ್ವಲ್ಪ ಏರುಪೇರಾಗಬಹುದು. ಪರೀಕ್ಷೆ, ಅಂಕಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ ಮನೆಯಲ್ಲೇ ಅವರಿಗೆ ಸಾಧ್ಯವಾದಷ್ಟು ಶಿಕ್ಷಣ ಕೊಡೋಣ. ಅನೇಕರಿಗೆ ಉದ್ಯೋಗಕ್ಕೆ ತೊಂದರೆಯಾಗಿದೆ. ಇದರಿಂದ ನಮ್ಮ ಆರ್ಥಿಕತೆಗೆ ತೊಂದರೆಯಾಗಲಿದೆ. ಉದ್ಯೋಗದ ಅಗತ್ಯವಿರುವವರಿಗೆ ಕೌಶಲ ತರಬೇತಿ ಕೊಡಬೇಕು’ ಎಂದೂ ಅವರು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.