
ಬೆಂಗಳೂರು: ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಇದೇ 13 ಅಥವಾ 16ರಂದು ಪಥ ಸಂಚಲನಕ್ಕೆ ಅನುಮತಿ ನೀಡುವಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಸರ್ಕಾರಕ್ಕೆ ಹೊಸ ಪ್ರಸ್ತಾವ ಸಲ್ಲಿಸಿದೆ.
ಪಥ ಸಂಚನಲಕ್ಕೆ ಅನುಮತಿ ನೀಡುವ ಬಗ್ಗೆ ಹೈಕೋರ್ಟ್ ಸಲಹೆಯಂತೆ ಅಡ್ವೊಕೇಟ್ ಜನರಲ್ ಕಚೇರಿಯಲ್ಲಿ ಬುಧವಾರ ಸಭೆ ನಡೆಯಿತು. ಈ ಸಭೆಯಲ್ಲಿ ಅರ್ಜಿದಾರರೂ ಆಗಿರುವ ಆರ್‌ಎಸ್‌ಎಸ್‌ನ ಕಲಬುರಗಿ ಜಿಲ್ಲಾ ಸಮನ್ವಯಕಾರ ಅಶೋಕ್ ಪಾಟೀಲ್ ಅವರ ಪದಾಂಕಿತ ಹಿರಿಯ ವಕೀಲ ಎಂ. ಅರುಣ್ ಶ್ಯಾಮ್ ಸಮ್ಮುಖದಲ್ಲಿ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ ಶೆಟ್ಟಿ ಅವರಿಗೆ ಈ ಪ್ರಸ್ತಾವನೆ ಸಲ್ಲಿಸಿದರು.
ಸಭೆಯಲ್ಲಿ ಕೈಗೊಂಡ ತೀರ್ಮಾನದ ಬಗ್ಗೆ ಅಡ್ವೊಕೇಟ್ ಜನರಲ್ ಇದೇ 7ರಂದು ಹೈಕೋರ್ಟ್‌ಗೆ ವರದಿ ಸಲ್ಲಿಸಲಿದ್ದಾರೆ.
‘ಇದೇ 13 ಅಥವಾ 16ರಂದು ಪಥ ಸಂಚಲನ ನಡೆಸಲು ಉದ್ದೇಶಿಸಲಾಗಿದೆ. ಇದಕ್ಕೆ ಅನುಮತಿ ನೀಡಬೇಕು. ಅಂದು ಬೇರೆ ಯಾವುದೇ ಸಂಘಟನೆಗಳಿಗೆ ಅನುಮತಿ ನೀಡಬಾರದು. ಒಂದು ವೇಳೆ ಬೇರೆ ಸಂಘಟನೆಗಳು ಅನುಮತಿ ಕೋರಿದ್ದರೆ ಅವುಗಳಿಗೆ ಬೇರೊಂದು ದಿನ ನಿಗದಿಪಡಿಸಬೇಕು. ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ಉದ್ದೇಶದಿಂದ ಪಥ ಸಂಚಲನದಲ್ಲಿ ಚಿತ್ತಾಪುರ ತಾಲ್ಲೂಕಿನ ಆರ್‌ಎಸ್‌ಎಸ್ ಸ್ವಯಂ ಸೇವಕರು ಮಾತ್ರವೇ ಭಾಗವಹಿಸುತ್ತಾರೆ. ನೆರೆಯ ತಾಲ್ಲೂಕಿನವರು ಭಾಗವಹಿಸಬಾರದು ಎಂದು ಸೂಚಿಸಲಾಗಿದೆ. ಪಥ ಸಂಚಲನದಲ್ಲಿ 600ರಿಂದ 850 ಸ್ವಯಂ ಸೇವಕರು ಗಣವೇಷದಲ್ಲಿ ಇರುತ್ತಾರೆ. ಸಾಮಾನ್ಯವಾಗಿ ನಡೆಸುವ ನಾಲ್ಕು ಸಾಲಿನ ಪಥಸಂಚಲನದ ಬದಲಿಗೆ 3 ಸಾಲಿನಲ್ಲಿಯೇ ಮೂರು ಕಿಲೋ ಮೀಟರ್ ಪಥ ಸಂಚಲನ ನಡೆಸಲಾಗುತ್ತದೆ. ಅದು ಸುಮಾರು 37ರಿಂದ 45 ನಿಮಿಷದಲ್ಲಿ ಪೂರ್ಣಗೊಳ್ಳಲಿದೆ. ಈ ವೇಳೆ ಸಂಚಾರ ದಟ್ಟಣೆ ತಪ್ಪಿಸಲು ಪೊಲೀಸರಿಗೆ ಸ್ವಯಂ ಸೇವಕರು ಸಹಕಾರ ನೀಡಲಿದ್ದಾರೆ’ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.
‘ಪಥ ಸಂಚಲನದ ವೇಳೆ ಯಾವುದೇ ಘೋಷಣೆ ಕೂಗುವುದಿಲ್ಲ. ಕೇವಲ ಘೋಷ್ (ಬ್ಯಾಂಡ್) ವಾದ್ಯ ನುಡಿಸಲಾಗುತ್ತದೆ. ಆರ್‌ಎಸ್‌ಎಸ್ ಯಾರ ಭಾವನೆಗಳಿಗೂ ಧಕ್ಕೆ ತರುವುದಿಲ್ಲ. ಯಾರನ್ನೂ ಅಪಹಾಸ್ಯ ಮಾಡುವುದಿಲ್ಲ. ಸಂಪೂರ್ಣ ಪಥ ಸಂಚಲನವನ್ನು ಡ್ರೋನ್ ಕ್ಯಾಮರಾ ಮೂಲಕ ಚಿತ್ರೀಕರಣ ನಡೆಸಲಾಗುತ್ತದೆ. ಗೂಗಲ್ ಮ್ಯಾಪ್ ಮೂಲಕ ಫೋಟೊಗಳನ್ನು ತೆಗೆಯಲಾಗುತ್ತದೆ. ಪಥ ಸಂಚಲನಕ್ಕೆ ಪರವಾನಗಿ ನೀಡಲು ಜಿಲ್ಲಾಡಳಿತ ವಿಧಿಸುವ ಎಲ್ಲಾ ಷರತ್ತುಗಳನ್ನೂ ಪಾಲಿಸಲಾಗುವುದು. ಪಥ ಸಂಚಲನದ ಕೊನೆಯಲ್ಲಿ ಬಜಾಜ್ ಕಲ್ಯಾಣ ಮಂಟಪದೊಳಗೆ ಸ್ವಯಂ ಸೇವಕರ ಸಭೆ ನಡೆಸಲಿದ್ದು, ಅದಕ್ಕಾಗಿ ಅಗತ್ಯ ಅನುಮತಿಯನ್ನು ಈಗಾಗಲೇ ಪಡೆಯಲಾಗಿದೆ’ ಎಂದು ಪ್ರಸ್ತಾವನೆಯಲ್ಲಿ ವಿವರಿಸಲಾಗಿದೆ.
ಸಭೆಯಲ್ಲಿ ಕಲಬುರಗಿ ಜಿಲ್ಲಾಡಳಿತದ ಅಧಿಕಾರಿಗಳೂ ಇದ್ದರು. ಆರ್‌ಎಸ್ಎಸ್ ಪರ ಕಡ್ಲೂರ್ ಸತ್ಯನಾರಾಯಣಾಚಾರ್ಯ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.