ADVERTISEMENT

ಆರ್‌ಎಸ್ಎಸ್ ವಿರುದ್ಧ ನೈತಿಕ ಯುದ್ಧಕ್ಕೆ ಸಕಾಲ: ಇಂದೂಧರ ಹೊನ್ನಾಪುರ

ಡಿಎಸ್‌ಎಸ್‌ ಪ್ರತಿರೋಧ ಸಮಾವೇಶದಲ್ಲಿ ಇಂದೂಧರ ಹೊನ್ನಾಪುರ ಸಲಹೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 15:59 IST
Last Updated 11 ನವೆಂಬರ್ 2025, 15:59 IST
<div class="paragraphs"><p>ಆರ್‌ಎಸ್‌ಎಸ್ ವಿರುದ್ಧ ಡಿಎಸ್‌ಎಸ್‌ ಪ್ರತಿರೋಧ ಸಮಾವೇಶದಲ್ಲಿ ಮಾವಳ್ಳಿ ಶಂಕರ್, ಗುರುಪ್ರಸಾದ ಕೆರಗೋಡು ಮತ್ತು ಇಂದೂಧರ ಹೊನ್ನಾಪುರ ಸಮಾಲೋಚನೆಯಲ್ಲಿ ತೊಡಗಿದ್ದರು. </p></div>

ಆರ್‌ಎಸ್‌ಎಸ್ ವಿರುದ್ಧ ಡಿಎಸ್‌ಎಸ್‌ ಪ್ರತಿರೋಧ ಸಮಾವೇಶದಲ್ಲಿ ಮಾವಳ್ಳಿ ಶಂಕರ್, ಗುರುಪ್ರಸಾದ ಕೆರಗೋಡು ಮತ್ತು ಇಂದೂಧರ ಹೊನ್ನಾಪುರ ಸಮಾಲೋಚನೆಯಲ್ಲಿ ತೊಡಗಿದ್ದರು.

   

ಪ್ರಜಾವಾಣಿ ಚಿತ್ರ.

ಬೆಂಗಳೂರು: ‘ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿಯಾಗಿ ನಡೆದುಕೊಳ್ಳುತ್ತಲೇ ಇಲ್ಲಿನ ಕಾನೂನನ್ನು ಗೌರವಿಸದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ದ ನೈತಿಕ ಯುದ್ದವನ್ನು ದಲಿತ ಸಂಘರ್ಷ ಸಮಿತಿ ಸಾರುವ ಸಮಯ ಬಂದಿದ್ದು, ಬಹುಜನ ಸಂಘಟನೆಗಳು ಒಗ್ಗಟ್ಟಾಗಿ ಸಮರ್ಥವಾಗಿ ಎದುರಿಸಬೇಕು’ ಎಂದು ದಲಿತ, ಪ್ರಗತಿಪರ ಸಂಘಟನೆಗಳ ಹೋರಾಟಗಾರರು ಪ್ರತಿಪಾದಿಸಿದರು.

ADVERTISEMENT

ಗಾಂಧಿಭವನದಲ್ಲಿ ಮಂಗಳವಾರ ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್‌) ಸಂಘಟನೆಗಳ ಜಂಟಿ ವೇದಿಕೆ ಆಯೋಜಿಸಿದ್ದ ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ವಿರುದ್ಧ ಡಿಎಸ್‌ಎಸ್‌ ಪ್ರತಿರೋಧ ಸಮಾವೇಶ’ದಲ್ಲಿ ಜೈ ಭೀಮ್‌ ಘೋಷಣೆ ಮೊಳಗಿಸಿದರು.

ಸಮಾವೇಶ ಉದ್ಘಾಟಿಸಿದ ಪತ್ರಕರ್ತ ಇಂದೂಧರ ಹೊನ್ನಾಪುರ, ‘ನೂರು ವರ್ಷ ತುಂಬಿದ ಸಂದರ್ಭದಲ್ಲಿ ಸೌಹಾರ್ದಯುತ ಕಾರ್ಯಕ್ರಮ ನಡೆಸುವ ಬದಲು ಕರಿ ಪ್ಯಾಂಟ್, ಟೋಪಿ ಧರಿಸಿ ಕೈಯಲ್ಲಿ ಲಾಠಿ ಹಿಡಿದು ಭಯ ಹುಟ್ಟಿಸುವ ಕೆಲಸವನ್ನು ಆರ್‌ಎಸ್‌ಎಸ್‌ ದೇಶದಾದ್ಯಂತ ಮಾಡುತ್ತಿದೆ. ರಾಷ್ಟ್ರೀಯ ಸುಳ್ಳುಗಾರರ ಸಂಘವಾಗಿ ಮಾರ್ಪಟ್ಟಿದೆ. ಇಂತಹ ನಡೆ ವಿರುದ್ದದ ಹೋರಾಟದ ನಿರ್ಣಾಯಕ ಘಟ್ಟಕ್ಕೆ ಭಾರತವೂ ಬಂದು ನಿಂತಿದೆ. ಕೋಮುವಾದಿಗಳಿಂದ ದೇಶ ಉಳಿಸಿ ಬಹುಜನರ ಭಾರತವಾಗಿ ಉಳಿಸಿಕೊಳ್ಳಲು ಇದು ಸಕಾಲ’ ಎಂದು ಹೇಳಿದರು.

‘ಕೇಂದ್ರದಲ್ಲಿ ಛಾಯಾ ಸರ್ಕಾರವಾಗಿ ಕೆಲಸ ಮಾಡುತ್ತಲೇ ಬಹುತ್ವ ಭಾರತ ಹಾಳು ಮಾಡುವ ಪ್ರಯತ್ನವನ್ನುಆರ್‌ಎಸ್‌ಎಸ್ ಮಾಡುತ್ತಿದೆ. ನೂರು ವರ್ಷದಿಂದಲೂ ಬರೀ ದೇಶದ್ರೋಹಿ, ಸಂವಿಧಾನ ವಿರೋಧ ಚಟುವಟಿಕೆಯನ್ನೇ ಮಾಡಿಕೊಂಡು ಬಂದು ಈಗಲೂ ದೇಶಕ್ಕಿಂತ ನಾವೇ ದೊಡ್ಡವರು ಎನ್ನುವ ರೀತಿಯಲ್ಲಿ ವರ್ತಿಸುವುದನ್ನು ಒಪ್ಪಲಾಗದು. ತೆರಿಗೆ ಕಟ್ಟದೇ, ಗುರುದಕ್ಷಿಣೆ ಹೆಸರಲ್ಲಿ ಕೋಟಿಗಟ್ಟಲೇ ಹಣ ಪಡೆಯುತ್ತಿರುವುದನ್ನು ನಾವು ಪ್ರಶ್ನಿಸಲೇಬೇಕಿದೆ’ ಎಂದರು.

ಸಂಚಾಲಕ ಮಾವಳ್ಳಿ ಶಂಕರ್‌ ಮಾತನಾಡಿ, ‘ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಳೆದ ವರ್ಷ ದಾಳಿ ಮಾಡಿದ್ದ ಬೆಂಗಳೂರಿನ ಪಿಇಎಸ್‌ ಸಂಸ್ಥೆಯಲ್ಲಿ ಮೋಹನ್‌ ಭಾಗವತ್‌ ಭಾಷಣ ಮಾಡಿ ಹೋಗಿದ್ಧಾರೆ. ಇಂತಹ ಸಂಸ್ಥೆ ಜತೆ ಸೇರುವ ಒಳತಂತ್ರವಾದರೂ ಏನು ಎನ್ನುವುದು ಬಯಲಾಗಬೇಕಿದೆ. ಭಾರತೀಯ ಸಂವಿಧಾನ, ಪ್ರಜಾಪ್ರಭುತ್ವವನ್ನು ಎಂದಿಗೂ ಒಪ್ಪದ ಆರ್‌ಎಸ್ಎಸ್‌ ಅನ್ನು ಬೇರು ಸಹಿತ ಕಿತ್ತು ಹಾಕುವ ಶಕ್ತಿ ನಮಗೂ ಇದೆ. ಯುವಜನರನ್ನು ಈ ವಿಚಾರದಲ್ಲಿ ಜಾಗೃತಿಗೊಳಿಸಬೇಕಿದೆ’ ಎಂದು ಹೇಳಿದರು.‌

ಅಧ್ಯಕ್ಷತೆ ವಹಿಸಿದ್ದ ಸಮಿತಿ ಸಂಚಾಲಕ ಗುರುಪ್ರಸಾದ್ ಕೆರಗೋಡು ಮಾತನಾಡಿ, ‘ನೂರು ವರ್ಷ ತುಂಬಿದೆ ಎಂದು ಹೇಳಿಕೊಳ್ಳುತ್ತಾ ಆರ್‌ಎಸ್ಎಸ್‌ ಜಾತಿ ಧರ್ಮಗಳ ಹೆಸರಿನಲ್ಲಿ ಬೆಂಕಿ ಹಚ್ಚುವ ಕೆಲಸ ಹೆಚ್ಚಿದೆ. ಜೈ ಶ್ರೀರಾಮ್‌ ಎನ್ನುವ ಅವರ ಘೋಷಣೆಗೆ ಎದುರಾಗಿ ಜೈ ಭೀಮ್‌ ಸಮರ್ಥವಾಗಿದೆ. ಶೂದ್ರ ಸಮುದಾಯಗಳನ್ನು ಒಟ್ಟುಗೂಡಿಸಿ ಆರ್‌ಎಸ್‌ಎಸ್‌ ವಿರುದ್ಧ ಹೋರಾಡಲೇಬೇಕಿದೆ’ ಎಂದರು.

ಡಿಎಸ್ಎಸ್‌ನ ವಿ.ನಾಗರಾಜ್, ಇಂದಿರಾ ಕೃಷ್ಣಪ್ಪ, ಎನ್. ವೆಂಕಟೇಶ್, ಎನ್. ಮುನಿಸ್ವಾಮಿ, ಅಲಗೂಡು ಶಿವಕುಮಾರ್‌, ಗಿರಿಜಮ್ಮ, ಅಣ್ಣಯ್ಯ, ಹಿಂದುಳಿದ ವರ್ಗಗಳ ಸಮಿತಿಯ ಬಸವರಾಜ ಮಾಳಗಿ ಹಾಜರಿದ್ದರು.

‘ಪ್ರಿಯಾಂಕ್‌ ಕೇಳಿದ್ದರಲ್ಲಿ ತಪ್ಪೇನಿದೆ? ’

‘ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು ಯಾವುದೇ ಚಟುವಟಿಕೆ ನಡೆಸಲು ಅನುಮತಿ ಪಡೆಯಬೇಕು. ಲೆಕ್ಕಪತ್ರ ಕೊಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಳಿದ್ದರಲ್ಲಿ ತಪ್ಪೇನಿದೆ. ಅವರೇನೂ ಯಾರದ್ದಾದರೂ ಗಂಟಲಿಗೆ ಖಾರ ಸುರಿದರಾ’ ಎಂದು ಇಂದೂಧರ ಹೊನ್ನಾಪುರ ಪ್ರಶ್ನಿಸಿದರು. ‘ಜವಾಬ್ದಾರಿಯುತ ಸಚಿವರಾಗಿ ಪ್ರಶ್ನೆ ಮಾಡಿದ ಅವರನ್ನೇ ಕೆಲವರು ಬೆದರಿಸುತ್ತಿದ್ಧಾರೆ. ಈ ದಬ್ಬಾಳಿಕೆ ಸಹಿಸಲಾಗದು. ಅವರೊಬ್ಬ ವ್ಯಕ್ತಿಯಲ್ಲ. ದಲಿತ ಹಿಂದುಳಿದವರು ಶೂದ್ರ ಸಮುದಾಯಗಳ ಶಕ್ತಿ‘ ಎಂದು ಹೇಳಿದರು. ‘ಆರ್‌ಎಸ್‌ಎಸ್‌ ಸಂಘಟನೆ ನೋಂದಣಿ ಮಾಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳುವ ಮೂಲಕ ಭಾಗವತ್‌ ಅವರು ಸಂವಿಧಾನ ವಿರೋಧಿ ನಡೆ ಪ್ರದರ್ಶಿಸಿರುವುದರಿಂದ ಅವರ ವಿರುದ್ದ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಒಳಗೆ ಹಾಕಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.