ADVERTISEMENT

ಮಹಿಳೆಗೆ ₹1.5 ಕೋಟಿ ವಂಚನೆ: ಮೂವರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2021, 5:18 IST
Last Updated 17 ನವೆಂಬರ್ 2021, 5:18 IST

ಬೆಂಗಳೂರು: ಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರ ಕೊಡಿಸುವುದಾಗಿ ನಂಬಿಸಿ ₹1.5 ಕೋಟಿ ಹಣ ಪಡೆದು ವಂಚಿಸಿರುವ ಮೂವರ ವಿರುದ್ಧ ಜಯನಗರದ ಹೇಮಾ ಎಸ್‌.ರಾಜು ಎಂಬುವರು ಆರ್‌.ಟಿ.ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇದರ ಆಧಾರದಲ್ಲಿ ಈ ಹಿಂದೆ ಬಿಡಿಎ ಉಪ ಆಯುಕ್ತರಾಗಿದ್ದ ಆರ್‌.ಶಿವರಾಜ್‌, ಬಿಡಿಎ ಸೂಪರಿಂಟೆಂಡೆಂಟ್‌ ಮಹೇಶ್‌ಕುಮಾರ್‌ ಹಾಗೂ ಆರ್‌.ಟಿ.ನಗರ ನಿವಾಸಿಯಾಗಿರುವ ದಲ್ಲಾಳಿ ಮೋಹನ್‌ ಕುಮಾರ್‌ ವಿರುದ್ಧ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಹೆಣ್ಣೂರು ಹಾಗೂ ಶ್ರೀರಾಂಪುರ ಗ್ರಾಮದ ಒಟ್ಟು 3 ಎಕರೆ ಜಮೀನನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದವರು (ಬಿಡಿಎ) ಅರ್ಕಾವತಿ ಬಡಾವಣೆ ರಚನೆಗಾಗಿ ಸ್ವಾಧೀನಪಡಿಸಿಕೊಂಡಿದ್ದರು. ನಿಯಮದ ಪ್ರಕಾರ ಬಿಡಿಎಯವರು 1 ಎಕರೆ ಜಮೀನಿಗೆ 9,583 ಅಡಿ ಅಭಿವೃದ್ಧಿಪಡಿಸಿದ ನಿವೇಶನವನ್ನು ಪರಿಹಾರವಾಗಿ ನೀಡಬೇಕು. 2003ರಿಂದ ಈವರೆಗೂ ಪರಿಹಾರ ನೀಡಿಲ್ಲ ಎಂದು ಹೇಮಾ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

‘ಪರಿಹಾರ ಪಡೆಯುವ ಸಲುವಾಗಿ ಆಗಾಗ ಬಿಡಿಎ ಕಚೇರಿಗೆ ಹೋಗುತ್ತಿದ್ದೆ. ಮಹೇಶ್‌ಕುಮಾರ್‌ ಅವರು ನಮ್ಮ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ನೋಡಿಕೊಳ್ಳುತ್ತಿದ್ದರು. ಪರಿಹಾರ ಸಂಬಂಧ ಅವರ ಜೊತೆ ಮಾತನಾಡಿದ್ದೆ. ತಾನು ಪಿಆರ್‌ಆರ್‌ ವಿಭಾಗಕ್ಕೆ ವರ್ಗಾವಣೆಯಾಗಿರುವ ವಿಷಯ ತಿಳಿಸಿದ್ದ ಅವರು ಆರ್‌.ಟಿ ನಗರದ ಮೋಹನ್‌ಕುಮಾರ್‌ನನ್ನು ಭೇಟಿ ಮಾಡಿದರೆ ಆತ ತನ್ನ ಪ್ರಭಾವ ಬಳಸಿ ವರ್ಗಾವಣೆ ರದ್ದು ಮಾಡಿಸಬಲ್ಲ. ಆಗ ಮಾತ್ರ ಬಾಕಿ ಇರುವ ಜಮೀನಿನ ದಾಖಲೆಗಳನ್ನು ಪರಿಹರಿಸಲು ಸಾಧ್ಯ ಎಂದು ಹೇಳಿದ್ದಾಗಿ ಅವರು ದೂರಿನಲ್ಲಿ ವಿವರಿಸಿದ್ದಾರೆ’ ಎಂದಿದ್ದಾರೆ.

‘2020ರ ಜನವರಿಯಲ್ಲಿ ಮಹೇಶ್‌ ಅವರು ಕಾಫಿ ಡೇ ವೊಂದಕ್ಕೆ ನನ್ನನ್ನು ಕರೆದುಕೊಂಡು ಹೋಗಿದ್ದರು. ಅಲ್ಲಿ ಮೋಹನ್‌ಕುಮಾರ್‌ನನ್ನು ಪರಿಚಯಿಸಿದ್ದರು. ನಿನ್ನನ್ನು ಮತ್ತೆ ಭೂ ಸ್ವಾಧೀನ ವಿಭಾಗಕ್ಕೆ ವರ್ಗಾವಣೆ ಮಾಡಿಸಬೇಕಾದರೆ ಎಕರೆಗೆ ₹50 ಲಕ್ಷದಂತೆ ಪರಿಹಾರ ನೀಡಬೇಕು ಎಂದು ಮೋಹನ್‌, ಮಹೇಶ್‌ಗೆ ಹೇಳಿದ್ದ. ಅದಕ್ಕೆ ಮಹೇಶ್‌, ನನ್ನ 3 ಎಕರೆ ಜಮೀನಿಗೆ ಪರಿಹಾರ ಕೊಡಿಸುವಂತೆ ಹೇಳಿದ್ದ. ಅದಕ್ಕೆ ಆತ ₹1.5 ಕೋಟಿ ಬೇಡಿಕೆ ಇಟ್ಟಿದ್ದ. ₹1 ಕೋಟಿ ಮುಂಗಡವಾಗಿ ನೀಡುವಂತೆಯೂ ಸೂಚಿಸಿದ್ದ. ಬಾಕಿ ಇರುವ ₹50 ಲಕ್ಷ ಹಣವನ್ನು ಕೆಲಸ ಆದ ಬಳಿಕ ನೀಡುವಂತೆ ಸೂಚಿಸಿದ್ದ. ಮರು ದಿನವೇ ನಾನು ಮತ್ತು ಮಹೇಶ್‌ಕುಮಾರ್‌ ಜೊತೆಯಾಗಿ ಹೋಗಿ ಅದೇ ಕಾಫಿ ಡೇಯಲ್ಲಿ ಮೋಹನ್‌ಗೆ ₹50 ಲಕ್ಷ ಹಣ ಕೊಟ್ಟಿದ್ದೆವು. ಅದೇ ದಿನ ಆತ ಮಹೇಶ್‌ ಅವರನ್ನು ಮಾತೃ ಸಂಸ್ಥೆಗೆ ವರ್ಗಾವಣೆ ಮಾಡಿಸಿದ್ದ. ಬಳಿಕ ಹಂತ ಹಂತವಾಗಿ ಹಣ ಪಡೆದುಕೊಂಡಿದ್ದಾಗಿ ದೂರಿನಲ್ಲಿ ವಿವರಿಸಿದ್ದಾರೆ’ ಎಂದೂ ಮಾಹಿತಿ ನೀಡಿದ್ದಾರೆ.

‘ಒಂದೂವರೆ ವರ್ಷವಾದರೂ ಮೋಹನ್‌ ನನಗೆ ಪರಿಹಾರ ಕೊಡಿಸಿಲ್ಲ. ಹಣವನ್ನೂ ಹಿಂತಿರುಗಿಸಿಲ್ಲ. ಹಣ ಕೇಳಲು ಹೋದರೆ ಮಹೇಶ್‌ ಮತ್ತು ಮೋಹನ್‌ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕೊಲೆ ಮಾಡುವುದಾಗಿಯೂ ಬೆದರಿಸಿದ್ದಾರೆ ಎಂದೂ ಉಲ್ಲೇಖಿಸಿದ್ದಾರೆ’ ಎಂದೂ ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.