ADVERTISEMENT

ವಿಮಾನ ನಿಲ್ದಾಣದಲ್ಲಿ ಆರ್‌ಟಿ–ಪಿಸಿಆರ್ ಪರೀಕ್ಷೆ: 15 ನಿಮಿಷದಲ್ಲೇ ವರದಿ

ಕೋವಿಡ್‌ ಹರಡದಂತೆ ನಿಯಂತ್ರಿಸಲು ಮುಂಜಾಗ್ರತಾ ಕ್ರಮ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2020, 20:49 IST
Last Updated 22 ಡಿಸೆಂಬರ್ 2020, 20:49 IST
   

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋವಿಡ್ ಆರ್‌ಟಿ–ಪಿಸಿಆರ್ ‍ಪರೀಕ್ಷೆ ಪ್ರಾರಂಭವಾಗಿದ್ದು, ಪರೀಕ್ಷಾ ವರದಿಗಳು 15 ನಿಮಿಷಗಳಲ್ಲೇ ಪ್ರಯಾಣಿಕರ ಕೈ ಸೇರಲಿವೆ.

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆಯು (ಬಿಐಎಎಲ್‌) ವಿಮಾನ ಹಾರಾಟ ಕಾರ್ಯಾಚರಣೆ ವೇಳೆ ಕೋವಿಡ್‌ ಹರಡದಂತೆ ನಿಯಂತ್ರಿಸಲು ಅನೇಕ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ. ಈ ಸಲುವಾಗಿ ಆರಂಭಿಸಲಾದ ಕೋವಿಡ್ ಪರೀಕ್ಷಾ ಕೇಂದ್ರವನ್ನು ಆರಿಗಾ ರಿಸರ್ಚ್ ಸಂಸ್ಥೆಯು ನಿರ್ವಹಿಸುತ್ತಿದೆ.

‘ಟರ್ಮಿನಲ್‌ನಲ್ಲಿ ಮಾದರಿ ಸಂಗ್ರಹಿಸುವ ಕಿಯಾಸ್ಕ್ ಇಡಲಾಗಿದೆ. ಅದರ ಹೊರ ಭಾಗದಲ್ಲಿ ಪ್ರಯೋಗಾಲಯವನ್ನು ನಿರ್ಮಿಸಲಾಗಿದೆ. ವಿವಿಧೆಡೆಯಿಂದ ಇಲ್ಲಿಗೆ ಬರುವ ಹಾಗೂ ಇಲ್ಲಿಂದ ಬೇರೆಡೆಗೆ ತೆರಳುವ ಪ್ರಯಾಣಿಕರು ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಲು ಪ್ರಯೋಗಾಲಯ ಸಹಕಾರಿಯಾಗಿದೆ’ ಎಂದು ಬಿಐಎಲ್ ತಿಳಿಸಿದೆ.

ADVERTISEMENT

‘ಅಬೋಟ್ ಐಡಿ ನೌ ವಿಧಾನದ ಅಡಿಯಲ್ಲಿ ಆರ್‌ಟಿ–ಪಿಸಿಆರ್ ಪರೀಕ್ಷೆ ನಡೆಸಲಾಗುತ್ತಿದೆ. ಸಾಮಾನ್ಯವಾಗಿ ಆರ್‌ಟಿ–ಪಿಸಿಆರ್ ಪರೀಕ್ಷೆಯ ವರದಿ ಪಡೆಯಲು ಅನೇಕ ದಿನಗಳು ಬೇಕಾಗುತ್ತವೆ. ಆದರೆ, ಅಬೋಟ್ ಐಡಿ ನೌ ವಿಧಾನದಲ್ಲಿ ನಡೆಸುವ ಪರೀಕ್ಷೆಯ ಫಲಿತಾಂಶವನ್ನು ಕೇವಲ 15 ನಿಮಿಷಗಳೊಳಗೆ ನೀಡಲಾಗುತ್ತದೆ. ಇದರಿಂದ ಪರೀಕ್ಷೆಗೆ ಒಳಪಟ್ಟವರು ಕಾಯುತ್ತಾ ಕುಳಿತುಕೊಳ್ಳುವುದು ತಪ್ಪಲಿದೆ. ಡಿಜಿಟಲ್ ಮಾದರಿಯಲ್ಲಿ ಪರೀಕ್ಷೆಯ ವರದಿಯನ್ನು ನೀಡಲಾಗುವುದು. ಫಲಿತಾಂಶಗಳನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ ವೆಬ್‌ಸೈಟ್‌ನಲ್ಲಿ ಸೋಂದಣಿ ಮಾಡಲಾಗುವುದು’ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ವಿಮಾನ ನಿಲ್ದಾಣ: ಕೋವಿಡ್‌ ಪರೀಕ್ಷಾ ದರ ಪಟ್ಟಿ
ಪರೀಕ್ಷಾ ವಿಧಾನ; ದರ; ವರದಿ ಪಡೆಯಲು ತಗಲುವ ಸಮಯ
ಆರ್‌ಟಿ–ಪಿಸಿಆರ್ ಕ್ಷಿಪ್ರ ಪರೀಕ್ಷೆ;
₹ 2,400; 13 ನಿಮಿಷಗಳು
ಆರ್‌ಟಿ–ಪಿಸಿಆರ್ (ಸ್ಪೆಷಲ್ ಟರ್ನ್ ಅರೌಂಡ್); ₹ 2,500; 5ರಿಂದ 6 ಗಂಟೆಗಳು
ಆರ್‌ಟಿ–ಪಿಸಿಆರ್ (ಸಾಮಾನ್ಯ); ₹ 800; 24 ಗಂಟೆಗಳು
ವಿಮಾನ ನಿಲ್ದಾಣದ ಆಸ್ಟರ್ ವೈದ್ಯಕೀಯ ಕೇಂದ್ರ; ₹ 1,200; 24 ಗಂಟೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.