ADVERTISEMENT

ಆರ್‌ಟಿಇ ಪ್ರವೇಶ: ಸರ್ಕಾರಕ್ಕೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2019, 20:06 IST
Last Updated 28 ಫೆಬ್ರುವರಿ 2019, 20:06 IST

ಬೆಂಗಳೂರು: ‘ವಾಸ ಪ್ರದೇಶ ವ್ಯಾಪ್ತಿಯಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆಗಳು ಇದ್ದಲ್ಲಿ ಅಂತಹ ಕಡೆ ‘ಶಿಕ್ಷಣ ಹಕ್ಕು ಕಾಯ್ದೆ’ಯಡಿ (ಆರ್‌ಟಿಇ) ಪ್ರವೇಶ ಪಡೆಯಲು ಖಾಸಗಿ ಅನುದಾನ ರಹಿತ ಶಾಲೆಗಳನ್ನು ಪರಿಗಣಿಸುವಂತಿಲ್ಲ’ ಎಂದು ಹೊರಡಿಸಲಾದ ಅಧಿಸೂಚನೆಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿಲಾಗಿದೆ.

ಈ ಕುರಿತಂತೆ ನಗರದ ಕುರುಬರಹಳ್ಳಿಯ ‘ಎಜುಕೇಷನ್‌ ರೈಟ್ಸ್‌ ಟ್ರಸ್ಟ್‌’ನ ಟ್ರಸ್ಟೀ ಸಿ.ಸುರೇಶ್‌ ಕುಮಾರ್ ಸೇರಿದಂತೆ ಐವರು ಹಾಗೂ ಆರ್‌ಟಿಇ ವಿದ್ಯಾರ್ಥಿಗಳು ಮತ್ತು ಪೋಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎನ್‌.ಯೋಗಾನಂದ ಅವರು ಸಲ್ಲಿಸಿರುವ ಎರಡು ಪ್ರತ್ಯೇಕ ಅರ್ಜಿಗಳನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್‌.ನಾರಾಯಣ ಸ್ವಾಮಿ ಹಾಗೂ ಪಿ.ಎಸ್‌.ದಿನೇಶ್‌ ಕುಮಾರ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ಪ್ರತಿವಾದಿ ಪ್ರಾಥಮಿಕ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಲು ನ್ಯಾಯಪೀಠ, ಅರ್ಜಿದಾರರು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಆರ್‌ಟಿಇ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಪ್ರತಿವಾದಿಗಳು ಆಕ್ಷೇಪಣೆ ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶ
ನೀಡಿದೆ.

ADVERTISEMENT

ಪ್ರಕರಣವೇನು?: ‘ನೆರೆಹೊರೆಯಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆಗಳಿದ್ದರೆ ಅಂತಹ ಕಡೆ ಆರ್‌ಟಿಇ ಅಡಿ ಖಾಸಗಿ ಶಾಲೆಗಳಲ್ಲಿ ಪ್ರವೇಶಕ್ಕೆ ಅವಕಾಶವಿಲ್ಲ’ ಎಂದು ರಾಜ್ಯ ಸರ್ಕಾರ ‘ಕರ್ನಾಟಕ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ನಿಯಮಗಳು-2012ರ ನಿಯಮ 4ಕ್ಕೆ ತಿದ್ದುಪಡಿ ತಂದಿರುವುದನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.

‘ತಿದ್ದುಪಡಿ ಕುರಿತಂತೆ 2019ರ ಜನವರಿ 30ರಂದು ಹೊರಡಿಸಿರುವ ಅಧಿಸೂಚನೆ ಕೇಂದ್ರದ ‘ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಮೂಲ ಕಾಯ್ದೆ-2009’ಕ್ಕೆ ತದ್ವಿರುದ್ಧವಾಗಿದೆ. ಇದರಿಂದ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಆದ್ದರಿಂದ ಈ ಅಧಿಸೂಚನೆ ರದ್ದುಗೊಳಿಸಬೇಕು’’ ಎಂಬುದು ಅರ್ಜಿದಾರರ
ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.