ADVERTISEMENT

ಆರ್‌ಟಿಇ ಅಡಿ ಶೇ 25ರಷ್ಟು ಸೀಟು: 2019ರ ತಿದ್ದುಪಡಿ ವಾಪಸ್ ಪಡೆಯುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 23:07 IST
Last Updated 27 ಜನವರಿ 2026, 23:07 IST
<div class="paragraphs"><p>ಆರ್‌ಟಿಇ </p></div>

ಆರ್‌ಟಿಇ

   

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ ಶೇ 25ರಷ್ಟು ಸೀಟುಗಳನ್ನು ಉಚಿತವಾಗಿ ನೀಡುವುದನ್ನು ಸರ್ಕಾರಿ, ಅನುದಾನಿತ ಶಾಲೆಗಳಿಗೆ ಸೀಮಿತಗೊಳಿಸಿ 2019ರಲ್ಲಿ ಮಾಡಿರುವ ತಿದ್ದುಪಡಿಯನ್ನು ರಾಜ್ಯ ಸರ್ಕಾರ ವಾಪಸ್‌ ಪಡೆಯುವ ಸಾಧ್ಯತೆಯಿದೆ.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ, ‌‌‘ಎಲ್ಲ ರಾಜ್ಯಗಳು ಖಾಸಗಿ ಶಾಲೆಗಳಲ್ಲಿ ಶೇಕಡ 25ರಷ್ಟು ಸೀಟುಗಳನ್ನು ಆರ್‌ಟಿಇ ಕೋಟಾ ಮೂಲಕ ತುಂಬುವುದನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಈ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗುವುದು’ ಎಂದು ಹೇಳಿದರು.

ADVERTISEMENT

ಆದರೆ, ‘ಈ ತಿದ್ದುಪಡಿಗಳನ್ನು ಹಿಂಪಡೆಯುವುದರಿಂದ ಆರ್ಥಿಕವಾಗಿ ಉಂಟಾಗುವ ಪರಿಣಾಮಗಳು, ಹಣಕಾಸು ಇಲಾಖೆಯ ಅಭಿಪ್ರಾಯ ಮತ್ತು ತೀರ್ಮಾನವೂ ಮಹತ್ವದ್ದಾಗಿರುತ್ತದೆ. ಖಾಸಗಿ ಶಾಲೆಗಳಲ್ಲಿ ಶೇ 25 ಸೀಟುಗಳನ್ನು ಆರ್‌ಟಿಇ ಕೋಟಾದಡಿ ಭರ್ತಿ ಮಾಡಿದರೆ, ಶುಲ್ಕ ಮರುಪಾವತಿಗಾಗಿ ಸುಮಾರು ₹500 ಕೋಟಿ ಅಗತ್ಯವಿದೆ’ ಎಂದು ಸಚಿವರು ವಿವರಿಸಿದರು.

‘ಆರ್‌ಟಿಇ ಕಾಯ್ದೆಯ ನಿಯಮ 4ಕ್ಕೆ ತರಲಾದ ತಿದ್ದುಪಡಿಗಳನ್ನು ಹಿಂಪಡೆಯುವುದಕ್ಕೆ ತಮಗೆ ವೈಯಕ್ತಿಕವಾಗಿ ಯಾವುದೇ ಆಕ್ಷೇಪ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಆರ್‌ಟಿಇ ಕಾಯ್ದೆಯನ್ನು ಜಾರಿಗೆ ತಂದ ಮೊದಲ ರಾಜ್ಯವಾಗಿದ್ದ ಕರ್ನಾಟಕವಾಗಿದೆ. ಆದರೆ, 2019ರಲ್ಲಿ ನಿಯಮ 4ಕ್ಕೆ ತಿದ್ದುಪಡಿ ಮಾಡಿ, ಸಮೀಪದಲ್ಲೇ (1 ಕಿಲೋ ಮೀಟರ್‌ ಒಳಗೆ) ಸರ್ಕಾರಿ ಅಥವಾ ಅನುದಾನಿತ ಶಾಲೆಗಳಿದ್ದರೆ ಖಾಸಗಿ ಶಾಲೆಗಳಲ್ಲಿ ಪ್ರವೇಶ ನೀಡುವುದಕ್ಕೆ ವಿನಾಯಿತಿ ನೀಡಿತ್ತು. ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರವು ಆಗ ಸಮರ್ಥಿಸಿಕೊಂಡಿತ್ತು.

ಈ ತಿದ್ದುಪಡಿಯೊಂದಿಗೆ, ರಾಜ್ಯ ಸರ್ಕಾರವು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪ್ರವೇಶಕ್ಕೆ ಆದ್ಯತೆ ನೀಡಿತು. ಇದರಿಂದ ಆರ್‌ಟಿಇ ಅಡಿ ಪ್ರವೇಶಕ್ಕೆ ಬೇಡಿಕೆ ಕುಸಿದು, ಶೇ 90 ಸೀಟುಗಳು ಖಾಲಿ ಉಳಿದಿವೆ.

2016–17ನೇ ಸಾಲಿನಲ್ಲಿ ವಿವಿಧ ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಆರ್‌ಟಿಇ ಅಡಿ ಪ್ರವೇಶಗಳು ಕಡಿಮೆಯಾಗಿದ್ದವು. ಪೋಷಕರು ನಕಲಿ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದು ಪ್ರಮುಖ ಕಾರಣಗಳಲ್ಲಿ ಒಂದಾಗಿತ್ತು. 

86 ಸಾವಿರಕ್ಕೂ ಹೆಚ್ಚು ಅರ್ಜಿಗಳಲ್ಲಿ ಸುಮಾರು 34 ಸಾವಿರ ಅರ್ಜಿಗಳು ಅನರ್ಹ ಜಾತಿ/ಆದಾಯ ಪ್ರಮಾಣಪತ್ರಗಳ ಕಾರಣದಿಂದ ತಿರಸ್ಕೃತಗೊಂಡವು. ಹಾಗೆಯೇ, 24 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ಅನರ್ಹ ಆಧಾರ್/ಮತದಾರರ ಗುರುತಿನ ಚೀಟಿಗಳ ಕಾರಣದಿಂದ ನಿರಾಕರಿಸಲಾಗಿತ್ತು.

ಸುಪ್ರೀಂ ಕೋರ್ಟ್ ಏನು ಹೇಳಿದೆ?

2009ರ ಆರ್‌ಟಿಇ ಕಾಯ್ದೆಯಡಿ ಖಾಸಗಿ ಅನುದಾನರಹಿತ ಅಲ್ಪಸಂಖ್ಯಾತವಲ್ಲದ ಶಾಲೆಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದ ಮಕ್ಕಳಿಗೆ ಶೇ 25ರಷ್ಟು ಸೀಟುಗಳು ನೀಡುವುದನ್ನು ರಾಜ್ಯಗಳು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಜನವರಿ 14ರಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತು.

ಇದನ್ನು ‘ರಾಷ್ಟ್ರೀಯ ಮಿಷನ್’ ಎಂದು ಹೇಳಿರುವ ನ್ಯಾಯಾಲಯ, ಈ ಕೋಟಾದಡಿ ಸೀಟುಗಳನ್ನು ಭರ್ತಿ ಮಾಡುವುದನ್ನು ಖಚಿತಪಡಿಸಲು ರಾಜ್ಯಗಳು ನಿಯಮಗಳನ್ನು ರೂಪಿಸಬೇಕು ಎಂದು ಆದೇಶಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.