ADVERTISEMENT

‘ಆರ್‌ಟಿಐ ಕಾಯ್ದೆ ತಿದ್ದುಪಡಿ ಅಸಂವಿಧಾನಿಕ’

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 19:24 IST
Last Updated 1 ಆಗಸ್ಟ್ 2019, 19:24 IST
ಜಯ್ನಾ ಕೊಠಾರಿ ಮಾತನಾಡಿದರು. ವಕೀಲ ವಿವೇಕ್ ಸುಬ್ಬಾರೆಡ್ಡಿ ಇದ್ದಾರೆ –ಪ್ರಜಾವಾಣಿ ಚಿತ್ರ
ಜಯ್ನಾ ಕೊಠಾರಿ ಮಾತನಾಡಿದರು. ವಕೀಲ ವಿವೇಕ್ ಸುಬ್ಬಾರೆಡ್ಡಿ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘2005ರ ಮಾಹಿತಿ ಹಕ್ಕು ಕಾಯ್ದೆಗೆ (ಆರ್‌ಟಿಐ) ತಿದ್ದುಪಡಿ ತಂದಿರುವುದು ಅಸಂವಿಧಾನಿಕ’ ಎಂದು ಹಿರಿಯ ವಕೀಲೆ ಜಯ್ನಾ ಕೊಠಾರಿ ಅಭಿಪ್ರಾಯಪಟ್ಟರು.

ಬಿ–ಪ್ಯಾಕ್, ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್ ಮತ್ತು ವೀದಿ ಸೆಂಟರ್‌ ಸಹಯೋಗದಲ್ಲಿ ನಡೆದ ‘ಆರ್‌ಟಿಐ ತಿದ್ದುಪಡಿ ಕಾಯ್ದೆಯ ಅರ್ಥೈಸುವಿಕೆ’ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

‘ಮಾಹಿತಿ ಆಯುಕ್ತರ ಅವಧಿಯು ನಿರ್ದಿಷ್ಟವಾಗಿ ನಿಗದಿಯಾಗಿದ್ದರೆ ಅವರು ಯಾವುದೇ ಅಂಜಿಕೆ, ಅಳುಕುಗಳಲ್ಲಿದೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಸರ್ಕಾರದ ಮರ್ಜಿಯಲ್ಲಿದ್ದರೆ ನಿರ್ಭೀತಿಯಿಂದ ಕೆಲಸ ಮಾಡಲು ಆಗುವುದಿಲ್ಲ’ ಎಂದು ಪ್ರತಿಪಾದಿಸಿದರು.

ADVERTISEMENT

ವೀದಿ ಸೆಂಟರ್‌ನ ಅಲೋಕ್ ಪ್ರಸನ್ನಕುಮಾರ್, ‘ಮಾಹಿತಿ ಆಯೋಗವು ಸರ್ಕಾರ ಹಿಡಿತದಲ್ಲಿ ಇದ್ದರೆ ಸಮರ್ಥವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ’ ಎಂದರು.

ಬಿಜೆಪಿ ಕಾನೂನು ಪ್ರಕೋಶದ ಮುಖ್ಯಸ್ಥ ವಿವೇಕ್ ಸುಬ್ಬಾ ರೆಡ್ಡಿ, ‘ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ಉದ್ದೇಶದಿಂದ ತಿದ್ದುಪಡಿ ತಂದಿಲ್ಲ, ಬದಲಿಗೆ ವೆಚ್ಚ ತಗ್ಗಿಸುವ ಉದ್ದೇಶವನ್ನು ಹೊಂದಿದೆ. ಸಾರ್ವಜನಿಕರ ತೆರಿಗೆ ಹೊರೆಯನ್ನು ತಗ್ಗಿಸಲು ಇದು ಅನುಲೂಕವಾಗಲಿದೆ’ ಎಂದು ಹೇಳಿದರು.

ಆರ್‌ಟಿಐ ಅಧ್ಯಯನ ಕೇಂದ್ರದ ಟ್ರಸ್ಟಿ ವೀರೇಶ್ ಬೆಳ್ಳೂರು ಮಾತನಾಡಿ, ‘ನ್ಯಾಯಾಲಯಗಳಲ್ಲಿ ಕಲಾಪಗಳು ನಿಗದಿತ ಸಮಯಕ್ಕೆ ಆರಂಭವಾಗುತ್ತವೆ. ನ್ಯಾಯಾಧೀಶರು ಸಮಯ ಪಾಲನೆಯನ್ನು ಕಡ್ಡಾಯವಾಗಿ ಮಾಡುತ್ತಾರೆ. ಆದರೆ, ಮಾಹಿತಿ ಹಕ್ಕು ಆಯುಕ್ತರು ನಿಗದಿತ ಸಮಯಕ್ಕೆ ಕಚೇರಿಗೆ ಬರುವುದಿಲ್ಲ. ಬೇಕೆಂದಾಗ ವಾಪಸ್ ಹೋಗುತ್ತಾರೆ. ಹೀಗಾಗಿ ಇವರಿಗೆ ಹೊಣೆಗಾರಿಕೆ ನಿಗದಿ ಮಾಡುವ ಅಗತ್ಯ ಇದೆ’ ಎಂದರು.

ಬಿ–ಪ್ಯಾಕ್‌ನ ವ್ಯವಸ್ಥಾಪಕ ಟ್ರಸ್ಟಿ ರೇವತಿ ಅಶೋಕ್ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.