ADVERTISEMENT

ಆರ್‌ಟಿಐ: ಸುತ್ತೋಲೆ ಹಿಂಪಡೆದ ಡಿಪಿಎಆರ್‌

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2023, 15:55 IST
Last Updated 6 ಅಕ್ಟೋಬರ್ 2023, 15:55 IST
<div class="paragraphs"><p>rti</p></div>

rti

   

ಬೆಂಗಳೂರು: ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆ ಅಡಿಯಲ್ಲಿ ಮಾಹಿತಿ ಕೋರಿ ಮೂರು ತಿಂಗಳ ಅವಧಿಯಲ್ಲಿ ಅಧಿಕ ಸಂಖ್ಯೆಯ ಅರ್ಜಿಗಳನ್ನು ಸಲ್ಲಿಸಿದವರ ವಿವರಗಳನ್ನು ಸಂಗ್ರಹಿಸಿ, ಕಳುಹಿಸುವಂತೆ ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ನೀಡಿದ್ದ ಸುತ್ತೋಲೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಹಿಂಪಡೆದಿದೆ.

ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠವು 2023ರ ಏಪ್ರಿಲ್‌ 10ರಂದು ನೀಡಿದ್ದ ಆದೇಶವನ್ನು ಆಧರಿಸಿ, ಡಿಪಿಎಆರ್‌ನ ಆಡಳಿತ ಸುಧಾರಣಾ ವಿಭಾಗವು ಸೆಪ್ಟೆಂಬರ್‌ 6ರಂದು ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಪತ್ರದ ಮೂಲಕ ಸೂಚನೆ ನೀಡಿತ್ತು. ಆರ್‌ಟಿಐ ಕಾಯ್ದೆ ಅಡಿಯಲ್ಲಿ ತ್ರೈಮಾಸಿಕ ಅವಧಿಯಲ್ಲಿ ಅಧಿಕ ಸಂಖ್ಯೆಯ ಅರ್ಜಿಗಳನ್ನು ಸಲ್ಲಿಸಿದ ವ್ಯಕ್ತಿಗಳ ಮಾಹಿತಿಯನ್ನು ಸೆ.20ರೊಳಗೆ ಸಲ್ಲಿಸುವಂತೆ ಪತ್ರದಲ್ಲಿ ಸೂಚಿಸಲಾಗಿತ್ತು.

ADVERTISEMENT

ಸೆ.6ರ ಪತ್ರವನ್ನು ಹಿಂಪಡೆದು ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಶುಕ್ರವಾರ ಪತ್ರ ಬರೆದಿರುವ ಡಿಪಿಎಆರ್‌ ಪ್ರಧಾನ ಕಾರ್ಯದರ್ಶಿ ಮುನೀಷ್‌ ಮೌದ್ಗಿಲ್‌, ‘ಇಲಾಖೆಯ ಮಾಹಿತಿ ಹಕ್ಕು ವಿಭಾಗದ ಅಧೀನ ಕಾರ್ಯದರ್ಶಿಯು ಸರ್ಕಾರದಿಂದ ಯಾವುದೇ ಅನುಮತಿ ಪಡೆಯದೆ ಅಥವಾ ಗಮನಕ್ಕೆ ತರದೇ ಪತ್ರವನ್ನು ಬರೆದಿದ್ದರು. ತಕ್ಷಣದಿಂದ ಜಾರಿಗೆ ಬರುವಂತೆ ಪತ್ರವನ್ನು ಹಿಂಪಡೆಯಲಾಗಿದೆ’ ಎಂದು ತಿಳಿಸಿದ್ದಾರೆ.

‘ರಾಜ್ಯ ಸರ್ಕಾರವು ತನ್ನ ಹೃದಯ ಮತ್ತು ಅಂತಃಕರಣದಿಂದ ಮಾಹಿತಿ ಹಕ್ಕು ಕಾಯ್ದೆಯನ್ನು ಜನಪರವಾಗಿ ಹಾಗೂ ಶಾಸನಬದ್ಧವಾಗಿ ಅನುಷ್ಠಾನಕ್ಕೆ ತರಲು ಬದ್ಧವಾಗಿದೆ. ಸರ್ಕಾರದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾಹಿತಿ ಹಕ್ಕು ಕಾಯ್ದೆ–2005 ಅನ್ನು ಶಾಸನಬದ್ಧವಾಗಿ ಪಾಲಿಸಬೇಕು. ಎಲ್ಲ ನಾಗರಿಕರಿಗೂ ಆರ್‌ಟಿಐ ಕಾಯ್ದೆಯಡಿ ಮಾಹಿತಿ ಪಡೆಯಲು ಶಾಸನಬದ್ಧ ಅಧಿಕಾರವಿದೆ. ಆದರೆ, ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದವರ ಕುರಿತ ಮಾಹಿತಿಯನ್ನು ಬೇರೆಯವರು ಪಡೆಯಲು ಅವಕಾಶ ಇರುವುದಿಲ್ಲ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.