ADVERTISEMENT

ಆರ್‌ಟಿಐ ಮೊಘಲ್‌ ದರ್ಬಾರಲ್ಲ: ಶಿಕ್ಷಣ ಇಲಾಖೆ ಅಧಿಕಾರಿಗೆ ₹35 ಸಾವಿರ ದಂಡ

​ಪ್ರಜಾವಾಣಿ ವಾರ್ತೆ
Published 29 ಜುಲೈ 2022, 21:20 IST
Last Updated 29 ಜುಲೈ 2022, 21:20 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಮಾಹಿತಿ ಹಕ್ಕು ಆಯೋಗವು ಅರೆನ್ಯಾಯಿಕ ಪ್ರಾಧಿಕಾರವಾಗಿದ್ದು ಸಾರ್ವಜನಿಕ ನಿಯಮಗಳಡಿ ಕಾರ್ಯ ನಿರ್ವಹಿಸಬೇಕೇ ಹೊರತು ಮನಸ್ಸಿಗೆ ಬಂದಂತೆ ಮಹಾರಾಜರು ಅಥವಾ ಮೊಘಲ್ ಮಾದರಿಯ ದರ್ಬಾರು ನಡೆಸಲು ಸಾಧ್ಯವಿಲ್ಲ’ ಎಂಬ ಕಟು ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್‌, ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಒದಗಿಸಲು ಎರಡು ವರ್ಷ ವಿಳಂಬ ತೋರಿದ ಕೆ.ಆರ್.ಪುರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ₹ 35 ಸಾವಿರ ದಂಡ ವಿಧಿಸಿದೆ.

ಈ ಸಂಬಂಧ ವೈಟ್‌ಫೀಲ್ಡ್ ನಿವಾಸಿ ಸಿಜೊ ಸೆಬಾಸ್ಟಿನ್ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿ ತೀರ್ಪು ನೀಡಿರುವ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ,‘ಮಾಹಿತಿ ನೀಡಲು ವಿಳಂಬ ಮಾಡಿ ತಪ್ಪು ಎಸಗಿದ ಅಧಿಕಾರಿಗೆ ಆಯೋಗವು ದಂಡ ವಿಧಿಸಬೇಕಿತ್ತು. ಆದರೆ, ಈ ಪ್ರಕರಣದಲ್ಲಿ ವಿಧಿಸದೇ ಇರುವುದು ಸಮ್ಮತವಲ್ಲ ಎಂಬ ಅರ್ಜಿದಾರರ ವಾದ ನ್ಯಾಯೋಚಿತವಾಗಿದೆ‘ ಎಂದು ಹೇಳಿದೆ.

‘ಈ ಪ್ರಕರಣದಲ್ಲಿ ಮಾಹಿತಿ ನೀಡಲು ಎರಡು ವರ್ಷ ವಿಳಂಬ ಆಗಿದ್ದರೂ, ಆಯೋಗವು ತಪ್ಪಿತಸ್ಥ ಅಧಿಕಾರಿಗೆ ದಂಡ ವಿಧಿಸಿಲ್ಲ. ಹಾಗಾಗಿ, ಇದಕ್ಕೆ ಕಾರಣರಾದ ಕೆ.ಆರ್.ಪುರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಂಕರ್ ಅವರಿಗೆ ₹ 25 ಸಾವಿರ ದಂಡ ವಿಧಿಸಲಾಗುವುದು. ಅಂತೆಯೇ ₹ 10 ಸಾವಿರ ಮೊತ್ತವನ್ನು ಅರ್ಜಿದಾರರಿಗೆ ಪರಿಹಾರ ರೂಪದಲ್ಲಿ ನೀಡಬೇಕು’ ಎಂದು ನ್ಯಾಯಪೀಠ ಘೋಷಿಸಿದೆ.

ADVERTISEMENT

‘ದಂಡ ಮತ್ತು ಪರಿಹಾರದ ಮೊತ್ತವನ್ನು 30 ದಿನಗಳಲ್ಲಿ ಅರ್ಜಿದಾರರಿಗೆ ಪಾವತಿ ಮಾಡಬೇಕು. ವಿಳಂಬ ಮಾಡಿದರೆ ಮೊದಲ 30 ದಿನಗಳಿಗೆ ಶೇ.2ರಷ್ಟು ಹಾಗೂ ನಂತರದ ದಿನಗಳಿಗೆ ಶೇ.3ರಷ್ಟು ಬಡ್ಡಿ ನೀಡಬೇಕು’ ಎಂದು ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.