ಸಾಂದರ್ಭಿಕ ಚಿತ್ರ
ಬೆಂಗಳೂರು: ಯುವತಿಗೆ ಕಾರು ಚಾಲನೆಯ ತರಬೇತಿ ನೀಡುವ ವೇಳೆ ಅಸಭ್ಯವಾಗಿ ವರ್ತಿಸಿದ್ದ ಆರೋಪದಡಿ ಕಾರು ತರಬೇತಿದಾರನ ವಿರುದ್ಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾಲಕ್ಷ್ಮೀಪುರದ 18 ವರ್ಷದ ಯುವತಿ ನೀಡಿದ ದೂರು ಆಧರಿಸಿ, ಬಸವೇಶ್ವರನಗರದ ಮಾರುತಿ ಡ್ರೈವಿಂಗ್ ಸ್ಕೂಲ್‌ನ ತರಬೇತುದಾರ ಅಣ್ಣಪ್ಪ ಅವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
‘ಪರೀಕ್ಷೆ ಮುಗಿಸಿದ್ದ ಯುವತಿ ಕಾರು ಚಾಲನೆ ಕಲಿಯಲು ತರಬೇತಿ ಶಾಲೆಗೆ ಸೇರಿದ್ದರು. ಅಣ್ಣಪ್ಪನೇ ಕಾರು ಚಾಲನೆ ಬಗ್ಗೆ ತರಬೇತಿ ನೀಡಿದ್ದರು. ಕೋರ್ಸ್ ಮುಗಿದ ಬಳಿಕ ಅಣ್ಣಪ್ಪ, ನಿಮ್ಮ ಮನೆಯ ಕಾರಿನಲ್ಲೇ ಪರಿಪೂರ್ಣವಾಗಿ ಚಾಲನೆ ಬಗ್ಗೆ ಹೇಳಿಕೊಡುತ್ತೇನೆ. ಒಂದು ಗಂಟೆಯ ವಿಶೇಷ ಕ್ಲಾಸ್‌ಗೆ ₹750 ಕೊಡಬೇಕು ಎಂದು ಯುವತಿಗೆ ಕೇಳಿದ್ದಾನೆ. ಯುವತಿ 15 ದಿನಗಳ ವಿಶೇಷ ಕ್ಲಾಸ್‌ಗೆ ಅಣ್ಣಪ್ಪನಿಗೆ ₹10,500 ಪಾವತಿಸಿದ್ದಾರೆ. ಅದರಂತೆ ಅಣ್ಣಪ್ಪ ವಿಶೇಷ ಕ್ಲಾಸ್ ಆರಂಭಿಸಿದ್ದರು’ ಎಂದು ಪೊಲೀಸರು ಹೇಳಿದರು.
‘ಪ್ರತಿ ದಿನ ಯುವತಿಯ ಮನೆ ಬಳಿ ಬಂದು ಯುವತಿಯ ಕಾರಿನಲ್ಲೇ ಚಾಲನೆ ತರಬೇತಿ ನೀಡುತ್ತಿದ್ದ. ಜುಲೈ 7ರಂದು ಬೆಳಿಗ್ಗೆ 6 ಗಂಟೆಗೆ ಯುವತಿ ಮನೆ ಬಳಿ ಬಂದಿರುವ ಅಣ್ಣಪ್ಪ, ಯುವತಿಯನ್ನು ಕಾರಿನಲ್ಲಿ ಕರೆದುಕೊಂಡು ಚಾಲನೆ ಬಗ್ಗೆ ಹೇಳಿಕೊಡಲು ಮುಂದಾಗಿದ್ದರು. ಬಸವೇಶ್ವರ ನಗರದ ನ್ಯಾಷನಲ್ ಶಾಲೆಯ ಮೇಲ್ಸೇತುವೆಯಲ್ಲಿ ತೆರಳುವಾಗ, ಯುವತಿ ಕಾರು ಚಾಲನೆ ಮಾಡುತ್ತಿದ್ದರು. ಆಗ ಅಸಭ್ಯವಾಗಿ ವರ್ತಿಸಿದ್ದರು’ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.