ADVERTISEMENT

ಬಿಇಒ ಕಚೇರಿಯಲ್ಲೇ ಟಿ.ಸಿ: ರುಪ್ಸ ವಿರೋಧ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 17:59 IST
Last Updated 13 ಆಗಸ್ಟ್ 2021, 17:59 IST

ಬೆಂಗಳೂರು: ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿಯೇ (ಬಿಇಒ) ವಿದ್ಯಾರ್ಥಿಗಳು ವರ್ಗಾವಣಾ ಪತ್ರವನ್ನು (ಟಿಸಿ) ಪಡೆಯಬಹುದು ಎಂಬ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್‌ ಅವರ ಹೇಳಿಕೆಗೆ ಖಾಸಗಿ ಶಾಲಾ ಆಡಳಿತ ಮಂಡಳಿಗಳು ವಿರೋಧ ವ್ಯಕ್ತಪಡಿಸಿವೆ.

‘ಪ್ರಧಾನ ಕಾರ್ಯದರ್ಶಿಯವರ ಹೇಳಿಕೆಯಿಂದ ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಗಳ ನಡುವೆ ಸಂಘರ್ಷ ಏರ್ಪಡುತ್ತದೆ. ಎಲ್ಲವೂ ಬಿಇಒ ಕಚೇರಿಯಲ್ಲೇ ಆಗುವುದಾದರೆ ಶಾಲೆಗಳಾದರೂ ಏಕೆ ಬೇಕು’ ಎಂದು ಅನುದಾನರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘದ (ರುಪ್ಸ) ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪ್ರಶ್ನಿಸಿದ್ದಾರೆ.

‘ವಿದ್ಯಾರ್ಥಿಗಳು ಟಿಸಿಯನ್ನು ಬಿಇಒ ಕಚೇರಿಯಲ್ಲಿ ಪಡೆದರೂ, ವ್ಯಾಸಂಗ ಪ್ರಮಾಣಪತ್ರ, ಅಂಕಪಟ್ಟಿ ಇತ್ಯಾದಿ ದಾಖಲೆಗಳನ್ನು ಪಡೆಯಲು ಶಾಲೆಗೆ ಬರಲೇಬೇಕು. ವಿದ್ಯಾರ್ಥಿಗಳನ್ನು ಶಾಲೆ ಮತ್ತು ಬಿಇಒ ಕಚೇರಿಗೆ ಅಲೆದಾಡಿಸುವುದೂ ಸೇರಿದಂತೆ ಅನೇಕ ಸಮಸ್ಯೆಗಳು ಇದರಿಂದ ಉದ್ಭವಿಸಲಿವೆ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಕರ್ನಾಟಕ ಶಿಕ್ಷಣ ಹಕ್ಕು 1983 ಹಾಗೂ ನಂತರ ಬಂದ ಆರ್‌ಟಿಇ ಕಾಯ್ದೆಯ ನಿಯಮ 5ರಲ್ಲಿ, ಟಿ.ಸಿ ನಿರಾಕರಿಸುವ ಅಧಿಕಾರ ಶಾಲಾ ಮುಖ್ಯಸ್ಥರಿಗೆ ಇರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಇದನ್ನು ಶಾಲೆಗಳು ಪಾಲಿಸುತ್ತವೆ. ಆದರೆ, ಹಿಂದಿನ ಶಿಕ್ಷಣ ಸಚಿವರು ಹಾಗೂ ಇಲಾಖೆಯ ಅಧಿಕಾರಿಗಳು ಶುಲ್ಕದ ವಿಚಾರವಾಗಿ ಗೊಂದಲದ ಹೇಳಿಕೆಗಳನ್ನು ನೀಡಿ ಪೋಷಕರನ್ನು ತಪ್ಪು ದಾರಿಗೆ ಎಳೆದರು’ ಎಂದೂ ಅವರು ದೂರಿದ್ದಾರೆ.

‘ಟಿ.ಸಿ ವಿಚಾರವನ್ನು ಶಾಲಾ ಮುಖ್ಯಸ್ಥರ ನಿರ್ಧಾರಕ್ಕೆ ಬಿಡಬೇಕು ಈವರೆಗೆ ಇದ್ದಂತಹ ನಿಯಮವನ್ನೇ ಮುಂದುವರಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.